ಬಡವರು ಭಾಷಣಗಳ ಕೊರತೆಯಿಂದ ನರಳುತ್ತಿದ್ದಾರೆ!

Update: 2018-07-07 18:40 GMT

ತಮ್ಮ ಹಾಸನ ರಾಜ್ಯದ ಬಜೆಟ್ ಮಂಡಿಸಿ ರೋಮಾಂಚಿತರಾಗಿ ಕುಮಾರಸ್ವಾಮಿ ಕುಳಿತರಲಾಗಿ, ಅಲ್ಲಿಗೆ ಪತ್ರಕರ್ತ ಎಂಜಲು ಕಾಸಿಯ ಆಗಮನವಾಯಿತು.
‘‘ಏನ್ ಬ್ರದರ್...ಚುನಾವಣೆಯ ಸಮಯದಲ್ಲಿ ಸಿದ್ದರಾಮಯ್ಯ ಸಿದ್ದರಾಮಯ್ಯ ಎಂದು ಅವರ ಹಿಂದೆಯೇ ತಿರುಗಾಡುತ್ತಾ ಇದ್ದೆ. ಈಗ ನನ್ನ ನೆನಪಾಯಿತಾ...’’ ಕುಮಾರಸ್ವಾಮಿ ವ್ಯಂಗ್ಯವಾಗಿ ಕೇಳಿದರು.
ಕಾಸಿಗೆ ಭೂಮಿಯೇ ಬಾಯಿ ಬಿಟ್ಟು ನುಂಗಬಾರದೆ ಎಂದೆನಿಸಿತು. ಆದರೂ ಮಾನ ಉಳಿಸಬೇಕಲ್ಲ....‘‘ಸಾರ್...ಸಿದ್ದರಾಮಯ್ಯ ಹಿಂದೆ ಓಡಾಡಿದ್ರೂ ನಿಮ್ ಪರವಾಗಿ ಕೆಲಸ ಮಾಡ್ತಿದ್ದೆ ಸಾರ್. ಆದುದರಿಂದಲೇ ಅವರು ಚಾಮುಂಡೇಶ್ವರಿಯಲ್ಲಿ ಸೋತ್ರು ಸಾರ್...’’ ಕಾಸಿ ಹೇಳಿದ.

‘‘ಬಿಡು ಬ್ರದರ್ ಎಲ್ಲ ನಂಗೆ ಗೊತ್ತು. ಇರಲಿ....ಏನು ಬಂದಿರುವುದು...’’ ಕುಮಾರಸ್ವಾಮಿ ಕೇಳಿದರು. ‘‘ಸಾರ್ ಬಜೆಟ್ ಸೂಪರ್ ಸಾರ್... ನಿಮ್ಮ ಪಕ್ಷಕ್ಕೆ ಓಟು ಹಾಕದವರಿಗೆಲ್ಲ ಒಳ್ಳೆಯ ಪಾಠ ಕಲಿಸಿದ್ರಿ...ನಿಮ್ಮ ಈ ಬಜೆಟ್‌ಗೆ ಯಾರು ಮಾದರಿ ಸಾರ್?’’ ಕಾಸಿ ಬೆಣ್ಣೆ ಹಚ್ಚತೊಡಗಿದ.
‘‘ನೋಡ್ರೀ...ನಮ್ಮದು ಮೋದಿ ಮಾದರಿ ಬಜೆಟ್. ಇಂದಿನ ಬಜೆಟ್‌ಗೆ ಮೋದಿಯೇ ಸ್ಫೂರ್ತಿ.....ಮುಂದಿನ ದಿನಗಳಲ್ಲಿ ಮೋದಿ ಮಾದರಿಯಲ್ಲೇ ಆಡಳಿತ ನೀಡಬೇಕು ಎಂದು ಉದ್ದೇಶಿಸಿದ್ದೇನೆ....’’
‘‘ಅದು ಹೇಗೆ ಸಾರ್?’’
‘‘ವಸ್ತುಗಳ ಬೆಲೆ ಹೆಚ್ಚಿಸಿದಷ್ಟೂ ನಾಯಕನ ಬೆಲೆ ಹೆಚ್ಚುತ್ತದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿಯವರು ಸಾಧಿಸಿ ತೋರಿಸಿದ್ದಾರೆ. ಅದಕ್ಕೆ ನಾನು ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಿರುವುದು....’’ ಕುಮಾರ ವಿವರಿಸಿದರು.
‘‘ಆದರೆ ಬಡವರ ಅಕ್ಕಿಯ ಕೆಜಿಯನ್ನು ಇಳಿಸಿದ್ದೀರಲ್ಲ?’’ ಕಾಸಿ ಅರ್ಥವಾಗದೆ ಕೇಳಿದ.

‘‘ನೋಡ್ರೀ....ಬಡವರಿಗೆ ಅಕ್ಕಿ ಕೊಟ್ಟವರ ಗತಿ ಏನಾಯಿತು ಎಂದು ನೋಡಿದ್ದೀರಲ್ಲ? ಬಡವರಿಗೆ ಬೇಕಾಗಿರುವುದು ಅಕ್ಕಿಯಲ್ಲ. ಅವರಿಗೆ ಹೊಟ್ಟೆ ತುಂಬಾ ಭಾಷಣದ ಅಗತ್ಯವಿದೆ. ಇಂದು ನರೇಂದ್ರ ಮೋದಿಯವರು ಈ ಭಾಷಣಗಳ ಮೂಲಕ ದೇಶದ ಬಡವರನ್ನು ಅದೆಷ್ಟು ಉದ್ಧಾರ ಮಾಡಿದ್ದಾರೆ. ಆದುದರಿಂದ ನಾನು ಕೂಡ ಮುಂದಿನ ದಿನಗಳಲ್ಲಿ ಅಕ್ಕಿಯ ಬದಲಿಗೆ ಭಾಷಣವನ್ನು ವಿತರಿಸಲು ಶುರು ಮಾಡಲಿದ್ದೇನೆ. ಬಡವರಿಗೆ ಅಕ್ಕಿ ಕೊಟ್ಟು ಅವರನ್ನು ಬಡವರೆಂದು ಅವಮಾನಿಸಿದ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರು ಸೋತರು. ಆ ತಪ್ಪು ನಾನು ಮಾಡುವುದಿಲ್ಲ...’’ ಕುಮಾರಸ್ವಾಮಿ ಉತ್ತರಿಸಿದರು. ‘‘ಸಾರ್ ಮದ್ಯದ ಬೆಲೆ ಏರಿಸಿದ್ದೀರಲ್ಲ ಸಾರ್....’’ ಕಾಸಿ ಈಗ ಮನವಿ ಸಲ್ಲಿಸುವವನಂತೆ ಕೇಳಿದ.
‘‘ನೋಡ್ರೀ...ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಾಗಿರುವಾಗ ನಾನು ಎಣ್ಣೆ ಬೆಲೆ ಜಾಸ್ತಿ ಮಾಡಿದರೆ ತಪ್ಪೇನ್ರೀ?’’ ಕುಮಾರಸ್ವಾಮಿ ಕೇಳಿದರು.
‘‘ಸಾರ್...ಇದು ಕುಡಿಯುವ ಎಣ್ಣೆ ಸಾರ್...’’ ಕಾಸಿ ಆತಂಕದಿಂದ ಕೇಳಿದ.
‘‘ಎಣ್ಣೆ ಅಂದ್ಮೇಲೆ ಎಣ್ಣೆಯೆ. ವಾಹನಗಳು ಕುಡಿಯುವ ಎಣ್ಣೆಯನ್ನು ಮನುಷ್ಯರು ಕುಡಿಯಲು ಆಗುತ್ತಾ....ಪೆಟ್ರೋಲ್ ಬಂಕ್ ಎಣ್ಣೆ ಕುಡಿದರೆ ವಾಹನಗಳು ತೂರಾಡತ್ತೆ. ಬಾರ್‌ನಲ್ಲಿರುವ ಎಣ್ಣೆ ಕುಡಿದರೆ ಮನುಷ್ಯರು ತೂರಾಡ್ತಾರೆ....ಕೇಂದ್ರದಲ್ಲಿ ಎಣ್ಣೆಗೆ ಜಾಸ್ತಿ ಮಾಡಿದಾಗ ನೀವ್ಯಾಕೆ ಕೇಳಲಿಲ್ಲ? ನಾನೇನು ಬಿಹಾರದಲ್ಲಿ ಮಾಡಿದ ಹಾಗೆ ಎಣ್ಣೆಯನ್ನೇ ನಿಷೇಧ ಮಾಡಿಲ್ಲವಲ್ಲ....’’ ಕುಮಾರಸ್ವಾಮಿಯವರು ಸಮರ್ಥಿಸಿದರು.
‘‘ಆದರೂ ಈ ಎಣ್ಣೆ ಸೇವಿಸಿಯೇ ನಿಮಗೆ ಜನರು ಮತ ಹಾಕಿರುವುದು. ಹಾಗಿರುವಾಗ ಎಣ್ಣೆಗೆ ಬಗೆದ ದ್ರೋಹ ಅಲ್ಲವೆ ಸಾರ್?’’ ಕಾಸಿ ಮತ್ತೆ ಕೇಳಿದ.
‘‘ಏನ್ರೀ ದ್ರೋಹ. ಎಣ್ಣೆ ಹಾಕಿ ಮತ ಹಾಕಿದ ಕಾರಣದಿಂದಲೇ ಬಿಜೆಪಿ ಅಷ್ಟು ಓಟು ಪಡೆಯಿತು. ಹಾಗೆಯೇ ಚುನಾವಣೆಯಲ್ಲಿ ರಾಜಕಾರಣಿಗಳಿಗೆ ತುಂಬಾ ಸಹಾಯ ಮಾಡುವ ಎಣ್ಣೆಯ ಬೆಲೆಯನ್ನು ಹೆಚ್ಚಿಸುವ ಮೂಲಕ ಅದರ ಗೌರವವನ್ನು ಹೆಚ್ಚಿಸಿದ್ದೇವೆ. ಮುಂದಿನ ದಿನಗಳಲ್ಲಿ ಎಣ್ಣೆಯ ಮೇಲಿನ ಗೌರವ ಇನ್ನಷ್ಟು ಜಾಸ್ತಿ ಮಾಡಲು ನಾನು ಕ್ರಮ ತೆಗೆದುಕೊಳ್ಳಲಿದ್ದೇನೆ....’’ ಕುಮಾರಸ್ವಾಮಿ ಬೆದರಿಕೆ ಹಾಕಿದರು.
‘‘ಸಾರ್...ತಮ್ಮ ಪರವಾಗಿ ಇರಲಿಲ್ಲ ಎಂದು ಪತ್ರಕರ್ತರ ಮೇಲೆ ಈ ಮೂಲಕ ರಾಜಕೀಯ ಸೇಡು ತೀರಿಸುತ್ತಿದ್ದೀರಿ ಎಂದು ಎಲ್ಲರೂ ಹೇಳುತ್ತಿದ್ದಾರೆ....’’ ಕಾಸಿ ಕಾಲಿನ ಹೆಬ್ಬೆರಳಲ್ಲಿ ಉಂಗುರ ಬರೆಯುತ್ತಾ ಹುಸಿ ಮುನಿಸು ಪ್ರದರ್ಶಿಸಿದ.
‘‘ನೋಡು ಬ್ರದರ್....ಈಗಾಗಲೇ ಬಡವರ ಅಕ್ಕಿ ಸಬ್ಸಿಡಿಯನ್ನು ಇಳಿಸಿದ್ದೇನೆ ಅದರಲ್ಲಿ ಉಳಿದ ಹಣದಿಂದ ಪತ್ರಕರ್ತರಿಗೆ ಸಬ್ಸಿಡಿಯಲ್ಲಿ ಎಣ್ಣೆ ಒದಗಿಸುವ ವ್ಯವಸ್ಥೆ ಮಾಡುವ. ಸುಮ್ನೆ ಪತ್ರಿಕೆಯಲ್ಲಿ ನನ್ನ ಬಗ್ಗೆ, ಅಪ್ಪಾಜಿ ಬಗ್ಗೆ ಇಲ್ಲದ್ದೆಲ್ಲ ಬರೆಯಬೇಡಿ...’’

‘‘ಸಾರ್, ಝಮೀರ್ ಅಹಮದ್ ಮೇಲೆ ಸಿಟ್ಟಿನಲ್ಲಿ ಮುಸ್ಲಿಮರಿಗೆ ಏನೂ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರಲ್ಲ...’’ ಕಾಸಿ ಅನುಮಾನ ಮುಂದಿಟ್ಟ. ‘‘ನೋಡ್ರೀ....ಮಂಗಳೂರಿನ ಒಬ್ಬರಿಗೆ ವಿಧಾನ ಪರಿಷತ್ ಸ್ಥಾನ ಕೊಟ್ಟಿದ್ದೇನೆ. ಅದು ಬಜೆಟ್‌ನಲ್ಲೇ ತೀರ್ಮಾನ ಆಗಿರುವುದು. ಮುಂದಿನ ಎಲ್ಲ ಬಕ್ರೀದ್, ರಮಝಾನ್‌ನಲ್ಲಿ ನಾನು ತಲೆಗೆ ಟೊಪ್ಪಿ ಇಟ್ಟು ಅವರ ಮಸೀದಿಯಲ್ಲಿ ಕಾಣಿಸಿಕೊಂಡು ಫೋಟೊ ತೆಗೆಯಲಿದ್ದೇನೆ...ಮುಸ್ಲಿಮರಿಗೆ ಇಷ್ಟು ಧಾರಾಳ ಸಾಕು. ಬೇಕಾದರೆ ಒಂದು ಜಯಂತಿಯನ್ನು ಅವರಿಗೆ ಕೊಟ್ಟು ಬಿಡುತ್ತೇನೆ....’’
‘‘ಯಾವ ಜಯಂತಿ ಸಾರ್?’’
 ‘‘ಅದೇರಿ...ಹೈದರಲಿ ಜಯಂತಿ, ಅದಿಲ್ ಶಾ ಜಯಂತಿ....ಏನು ಬೇಕಾದರೂ ಕೇಳಲಿ ನಾನು ಕೊಡುತ್ತೇನೆ. ಮುಂದಿನ ಬಜೆಟ್‌ನಲ್ಲಿ ಇನ್ನಷ್ಟು ಜಯಂತಿಗಳನ್ನು ಘೋಷಿಸಿ ಈ ಬಜೆಟ್‌ನಲ್ಲಿ ಆದ ಕೊರತೆಗಳನ್ನು ತುಂಬಲಿದ್ದೇನೆ....’’ ಕುಮಾರಸ್ವಾಮಿ ಘೋಷಿಸಿದರು.
‘‘ಕರಾವಳಿಗೆ ಏನೂ ಕೊಟ್ಟಿಲ್ಲ....ಅಂತ ಹೇಳ್ತಾ ಇದ್ದಾರೆ....’’
‘‘ಕರಾವಳಿಯವರು ಜೆಡಿಎಸ್‌ಗೆ ಎಷ್ಟು ಓಟು ಕೊಟ್ಟಿದ್ದಾರೋ, ಅಷ್ಟನ್ನು ನಾನು ಬಜೆಟ್‌ನಲ್ಲಿ ಅವರಿಗೆ ವಾಪಸ್ ಕೊಟ್ಟಿದ್ದೇನೆ....’’
‘‘ಏನೂ ಕೊಟ್ಟಿಲ್ಲ ಅಂತಾರೆ ಸಾರ್?’’
‘‘ನೋಡ್ರೀ...ಕರಾವಳಿಯಲ್ಲಿ ಭಾರೀ ಮಳೆ ಸುರೀತಾ ಇದೆಯಲ್ಲ? ಅದು ಯಾರ ಕೊಡುಗೆ? ನಮ್ಮ ಬಜೆಟ್ ವತಿಯಿಂದಲೇ ಕರಾವಳಿಗೆ ಈ ಬಾರಿ ಅತಿ ಹೆಚ್ಚು ಮಳೆಯನ್ನು ಸುರಿಸಿದ್ದೇವೆ....ಇದರಿಂದಾಗಿ ಎತ್ತಿನ ಹೊಳೆ ವಿವಾದ ಪರಿಹಾರವಾಗಲಿದೆ. ಸರಿ ಬ್ರದರ್....ಇನ್ನು ಹೋಗಿ. ಸಿದ್ದರಾಮಯ್ಯ ಮತ್ತೆ ಶಾಂತಿವನಕ್ಕೆ ಹೋಗುವ ಸಿದ್ಧತೆಯಲ್ಲಿದ್ದಾರೆ. ತಕ್ಷಣ ದಿಲ್ಲಿಗೆ ಹೋಗಬೇಕಾಗಿದೆ....’’ ಎಂದು ಕೂತಲ್ಲಿಂದ ಎದ್ದರು. ಕಾಸಿ ಮೆಲ್ಲಗೆ ಅಲ್ಲಿಂದ ತೊಲಗಿದ.

Writer - -ಚೇಳಯ್ಯ chelayya@gmail.com

contributor

Editor - -ಚೇಳಯ್ಯ chelayya@gmail.com

contributor

Similar News