ಮೋದಿ ಸರಕಾರ ಗುಂಪು ಹತ್ಯೆಯ ಪೂಜಕ: ಕಪಿಲ್ ಸಿಬಲ್
ಹೊಸದಿಲ್ಲಿ, ಜು. 8: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ‘ಬೈಲ್ ಗಾಡಿ’ ಎಂದು ವ್ಯಂಗ್ಯ ಮಾಡಿರುವುದಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ರವಿವಾರ ತಿರುಗೇಟು ನೀಡಿದ್ದಾರೆ.
ಬಿಜೆಪಿ ಆಡಳಿತದ ಇರುವ ರಾಜಸ್ಥಾನದಲ್ಲಿ ಶನಿವಾರ ಕೇಂದ್ರ ಹಾಗೂ ರಾಜ್ಯ ಸರಕಾರ ನಡೆಸುತ್ತಿರುವ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸುನಂದಾ ಪುಷ್ಕರ್ ಹತ್ಯೆ ಪ್ರಕರಣದಲ್ಲಿ ಶಶಿ ತರೂರ್‌ಗೆ ಜಾಮೀನು ದೊರಕಿದ ಬಳಿಕ ಅವರು ವ್ಯಂಗ್ಯವಾಡಿದ್ದರು. ‘‘ಕಾಂಗ್ರೆಸ್ ಅನ್ನು ಕೆಲವರು ಬೇಲ್ ಗಾಡಿ ಎಂದು ಕರೆಯಲು ಆರಂಭಿಸಿದ್ದಾರೆ. ಕಾಂಗ್ರೆಸ್‌ನ ಹಲವು ಪ್ರಮುಖ ನಾಯಕರು ಹಾಗೂ ಮಾಜಿ ಸಚಿವರು ಬೇಲ್‌ನಲ್ಲಿ ಹೊರಗಡೆ ಇದ್ದಾರೆ.’’ ಎಂದು ಮೋದಿ ಹೇಳಿದ್ದರು. ಮೋದಿ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿರುವ ಕಪಿಲ್ ಸಿಬಲ್, ‘‘ಥಳಿಸಿ ಹತ್ಯೆಗೈದ ಪ್ರಕರಣದಲ್ಲಿ ಜಾಮೀನಿನ ಮೂಲಕ ಬಿಡುಗಡೆಗೊಂಡ 8 ಮಂದಿ ಅಪರಾಧಿಗಳಿಗೆ ಜಯಂತ್ ಸಿನ್ಹಾ ಹೂ ಹಾರ ಹಾಕಿ ಸನ್ಮಾನಿಸಿದ್ದಾರೆ. ನೀವು ತಪ್ಪಾಗಿ ಗ್ರಹಿಸಿದ್ದೀರಿ ಮೋದಿ ಜಿ. ನಿಮ್ಮ ಸರಕಾರ ಗುಂಪು ಹತ್ಯೆಯ ಪೂಜಕ ಎಂದು ಅವರು (ಜಯಂತ್ ಸಿನ್ಹಾ) ಹೇಳುತ್ತಿದ್ದಾರೆ’’ ಎಂದು ಟ್ವೀಟ್ ಮಾಡಿದ್ದಾರೆ.
ಜಾರ್ಖಂಡ್‌ನ ರಾಮಗಢದಲ್ಲಿ ಗುಂಪು ಥಳಿಸಿ ಹತ್ಯೆ ನಡೆಸಿದ ಪ್ರಕರಣದ 8 ಮಂದಿ ಅಪರಾಧಿಗಳು ಜಾಮೀನು ಮೂಲಕ ಬಿಡುಗಡೆಗೊಂಡ ಬಳಿಕ ಕೇಂದ್ರ ಸಚಿವ ಜಯಂತ್ ಸಿನ್ಹಾ ಹೂ ಹಾರ ಹಾಕಿ ಸನ್ಮಾನಿಸಿದ ಘಟನೆ ಉಲ್ಲೇಖಿಸಿ ಸಿಬಲ್ ಈ ಹೇಳಿಕೆ ನಿಡಿದ್ದಾರೆ.