×
Ad

ಬಿಜೆಪಿಯ ಕ್ರಿಮಿನಲ್‌ಗಳನ್ನು ಸಾಗಿಸಲು ಬುಲೆಟ್ ರೈಲಿಗೂ ಸಾಧ್ಯವಿಲ್ಲ: ಖರ್ಗೆ

Update: 2018-07-10 19:18 IST

ಮುಂಬೈ,ಜು.10: ಬಿಜೆಪಿಯಲ್ಲಿ ಎಷ್ಟೊಂದು ಕ್ರಿಮಿನಲ್‌ಗಳು ತುಂಬಿಕೊಂಡಿದ್ದಾರೆಂದರೆ ಉದ್ದೇಶಿತ ಅಹ್ಮದಾಬಾದ್-ಮುಂಬೈ ಬುಲೆಟ್ ರೈಲಿಗೂ ಅವರನ್ನೆಲ್ಲ ಹೊತ್ತೊಯ್ಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರ ‘ಬೇಲ್ ಗಾಡಿ’ ಟೀಕೆಗೆ ತಿರುಗೇಟು ನೀಡಿದ್ದಾರೆ.

 ದೇಶಪ್ರೇಮ,ಕೃಷಿಕರ ಸಮಸ್ಯೆ,ದಲಿತರು ಮತ್ತು ಮಹಿಳೆಯರ ವಿರುದ್ಧದ ಕುರಿತು ಪ್ರಧಾನಿಯ ಮೌನ ಮತ್ತು ಸಂಸತ್ತಿನ ‘ಅಪಮೌಲ್ಯೀಕರಣ’ದಂತಹ ಇತರ ವಿಷಯಗಳಲ್ಲಿಯೂ ಅವರು ಮೋದಿ ವಿರುದ್ಧ ದಾಳಿ ನಡೆಸಿದರು.

2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಮುಂಬೈ ಮಹಾನಗರದ ಎಲ್ಲ ಆರೂ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿಗೆ ಪಾಠ ಕಲಿಸಲು ಶ್ರಮಿಸುವಂತೆ ಮಹಾರಾಷ್ಟ್ರದ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಖರ್ಗೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಜು.7ರಂದು ಜೈಪುರದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಸಂದರ್ಭ ಮೋದಿ ಅವರು ಹಿಂದಿಯ ‘ಬೈಲ್ ಗಾಡಿ(ಎತ್ತಿನ ಗಾಡಿ)’ ಶಬ್ಧವನ್ನು ಪ್ರಸ್ತಾಪಿಸಿ,ಕಾಂಗ್ರೆಸ್‌ನ ಹಲವಾರು ನಾಯಕರು ಜಾಮೀನು(ಬೇಲ್) ಪಡೆದುಕೊಂಡು ಹೊರಗಿರುವುದರಿಂದ ಆ ಪಕ್ಷವು ‘ಬೇಲ್ ಗಾಡಿ’ಯಾಗಿದೆ ಎಂದು ವ್ಯಂಗ್ಯವಾಡಿದ್ದರು.

ಮುಂಬೈ ಕಾಂಗ್ರೆಸ್ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಖರ್ಗೆ,ಮೋದಿಯವರು ನಮ್ಮ ಪಕ್ಷವನ್ನು ‘ಬೇಲ್ ಗಾಡಿ ’ಎಂದು ಕರೆದಿದ್ದಾರೆ. ಆದರೆ ಅವರ ಪಕ್ಷದಲ್ಲಿನ ಕ್ರಿಮಿನಲ್‌ಗಳು ‘ಬೇಲ್’ನಲ್ಲೂ ಇದ್ದಾರೆ,‘ಜೈಲ್’ನಲ್ಲೂ ಇದ್ದಾರೆ ಎಂದು ಕುಟುಕಿದರು.

ಗೋರಕ್ಷಣೆಯ ನೆಪದಲ್ಲಿ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯ ಹತ್ಯೆ ಮಾಡಿದ್ದ ಆರೋಪಿಗಳಿಗೆ ಕೇಂದ್ರ ಸಚಿವ ಜಯಂತ ಸಿನ್ಹಾ ಅವರಿಂದ ಪುಷ್ಪಮಾಲೆಗಳೊಂದಿಗೆ ಸ್ವಾಗತದ ಕುರಿತೂ ಬಿಜೆಪಿಯ ವಿರುದ್ಧ ದಾಳಿ ನಡೆಸಿದ ಅವರು,ಇನ್ನೋರ್ವ ಕೇಂದ್ರ ಸಚಿವ ಗಿರಿರಾಜ ಸಿಂಗ್ ಅವರು ಇತ್ತೀಚಿಗೆ ಬಿಹಾರದ ಜೈಲಿನಲ್ಲಿ ದಂಗೆ ಆರೋಪಿಗಳನ್ನು ಭೇಟಿಯಾಗಿದ್ದನ್ನೂ ಪ್ರಶ್ನಿಸಿದರು.

ಇಂತಹ ವಿಷಯಗಳ ಬಗೆ ಮೋದಿ ತುಟಿಪಿಟಕ್ಕೆನ್ನುವುದಿಲ್ಲ. ದಲಿತರು ಮತ್ತು ಮಹಿಳೆಯರ ವಿರುದ್ಧದ ದೌರ್ಜನ್ಯಗಳ ಕುರಿತೂ ಅವರು ಮಾತನಾಡುವುದಿಲ್ಲ. ಅವರ ಸಂಸತ್ತಿನ ಗೌರವವನ್ನು ತಗ್ಗಿಸಿದ್ದಾರೆ. ಕೇವಲ ಓರ್ವ ವ್ಯಕ್ತಿಗೆ(ಪ್ರಧಾನಿ) ಮಹತ್ವವನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಆರೆಸ್ಸೆಸ್ ಮತ್ತ ಬಿಜೆಪಿ ಕೂಟದ ವಿರುದ್ಧ ಟೀಕಾಪ್ರಹಾರ ನಡೆಸಿದ ಖರ್ಗೆ,ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಇತರರಿಂದ ದೇಶಭಕ್ತಿಯನ್ನು ಕಲಿಯಬೇಕಾದ ಅಗತ್ಯವಿಲ್ಲ ಎಂದು ಚುಚ್ಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News