ಹಸ್ಮುಖ್ ಅಧಿಯಾ, ಮುಖ್ಯ ಆರ್ಥಿಕ ಸಲಹೆಗಾರರಿಗೆ ನೋಟಿಸ್
ಹೊಸದಿಲ್ಲಿ, ಜು.10: ಭಾರತೀಯ ಬ್ಯಾಂಕ್‌ಗಳಲ್ಲಿ ಹೆಚ್ಚುತ್ತಿರುವ ಮರುಪಾವತಿಯಾಗದ ಸಾಲಗಳ ವಿಷಯಕ್ಕೆ ಸಂಬಂಧಿಸಿದಂತೆ ಲೋಕಸಭೆಯ ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ ನೇತೃತ್ವದ ಅಂದಾಜು ಸಮಿತಿಯು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣ್ಯನ್, ವಿತ್ತ ಕಾರ್ಯದರ್ಶಿ ಹಸ್ಮುಖ್ ಅಧಿಯಾ, ಆರ್‌ಬಿಐ ಸಹಾಯಕ ಗವರ್ನರ್ ಮಹೇಶ್ ಕುಮಾರ್ ಜೈನ್ ಹಾಗೂ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಚಂದ್ರ ಗರ್ಗ್‌ಗೆ ನೋಟಿಸ್ ಜಾರಿ ಮಾಡಿದೆ.
ಇದಕ್ಕೂ ಮುನ್ನ ಜೋಶಿ ಸಾರ್ವಜನಿಕ ಲೆಕ್ಕಾಚಾರ ಸಮಿತಿಯ ನೇತೃತ್ವ ವಹಿಸಿದ್ದು, ಆಮೂಲಕ 2ಜಿ ಹಗರಣದ ಕುರಿತು ವರದಿಯನ್ನು ಸಿದ್ಧಪಡಿಸಿದ್ದರು. ಅಂದಾಜು ಸಮಿತಿಯು, ತೆರಿಗೆ ಹಣವನ್ನು ಸರಕಾರವು ಸಮರ್ಥವಾಗಿ ಬಳಸುತ್ತಿದೆಯೇ ಎಂಬುದರ ಮೇಲೆ ನಿಗಾಯಿಡುತ್ತದೆ. ಈ ಹಿನ್ನೆಲೆಯಲ್ಲಿ ದೇಶದ ವಿತ್ತೀಯ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಕೆಟ್ಟಸಾಲಗಳ ಪರಿಶೀಲನೆ ನಡೆಸುವಲ್ಲಿ ನಿಷ್ಪಕ್ಷಪಾತ ಧೋರಣೆ ಅನುಸರಿಸುತ್ತಾರೆ ಎಂದು ಹೇಳಲಾಗುತ್ತಿದೆ. ಸಮಿತಿ ಜಾರಿ ಮಾಡಿರುವ ನೋಟಿಸ್‌ನಿಂದ ವಿತ್ತ ಸಚಿವಾಲಯದಲ್ಲಿ ಚಡಪಡಿಕೆ ಆರಂಭವಾಗಿದೆ.
ಸದ್ಯ ಪಿಯೂಶ್ ಗೋಯಲ್ ವಿತ್ತ ಸಚಿವರಾಗಿದ್ದು, ಅವರಿಗೂ ಹಿಂದಿನ ವಿತ್ತ ಸಚಿವ ಅರುಣ್ ಜೇಟ್ಲಿ ಈಗಲೂ ವಿವಿಧ ಯೋಜನೆಗಳ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ನಿಲುವಿಗೆ ಬದ್ಧವಾಗಿದ್ದಾರೆ. ಸದ್ಯ ಕೇಂದ್ರ ಸರಕಾರವು ಬ್ಯಾಂಕ್‌ಗಳಲ್ಲಿ ಹೆಚ್ಚುತ್ತಿರುವ ಎನ್‌ಪಿಎಗಳಿಂದಾಗಿ ಚಿಂತೆಗೀಡಾಗಿರುವ ಮಧ್ಯೆಯೇ ಜೋಶಿ ನೇತೃತ್ವದ ಸಮಿತಿ ಸದ್ಯ 10 ಲಕ್ಷ ಕೋಟಿಗೂ ಅಧಿಕವಿರುವ ಮರುಪಾವತಿಯಾಗದ ಸಾಲಗಳನ್ನು ಪರಿಶೀಲಿಸಲು ಮುಂದಾಗಿದೆ. ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಕೇಂದ್ರ ಸರಕಾರ ತೋರಿದ ವಿಳಂಬ ನೀತಿಯಿಂದಾಗಿ ಈಗ ಎನ್‌ಪಿಎ ಸಮಸ್ಯೆಯನ್ನು ನಿಯಂತ್ರಿಸುವುದು ಬಹಳ ಕಷ್ಟಕರವಾಗಿ ಪರಿಣಮಿಸಿದೆ.