ನೀವೇನು ದೇವರೇ?: ಪೆಟ್ರೋಲಿಯಂ ಸಚಿವಾಯಕ್ಕೆ ಸುಪ್ರೀಂ ತರಾಟೆ
ಹೊಸದಿಲ್ಲಿ, ಜು.10: ಸೋಮವಾರದಂದು ಪೆಟ್ರೋಲಿಯಂ ಸಚಿವಾಲಯ (ಎಮ್‌ಒಪಿಎನ್‌ಜಿ) ವನ್ನು ತರಾಟೆಗೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯ, ನೀವೇನು ದೇವರೇ ಅಥವಾ ಸರಕಾರಕ್ಕೂ ಮಿಗಿಲೇ?, ನ್ಯಾಯಾಧೀಶರು ನಿರುದ್ಯೋಗಿಯಾಗಿದ್ದು ನಿಮ್ಮ ದಯೆಯಲ್ಲಿದ್ದಾರೆ ಎಂದು ಭಾವಿಸಿದ್ದೀರಾ? ಎಂದು ಕೆಂಡಕಾರಿದೆ.
ಕೈಗಾರಿಕಾ ಇಂಧನವಾಗಿ ಬಳಸಲ್ಪಡುವ ಪೆಟ್ ಕೋಕ್‌ನ ಆಮದಿನ ಮೇಲೆ ನಿಷೇಧ ಹೇರಿರುವ ಬಗ್ಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಪೆಟ್ರೋಲ್ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ರವಿವಾರವಷ್ಟೇ ತಿಳಿಸಿದೆ ಎಂಬ ಮಾಹಿತಿ ಪಡೆದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಮದನ್ ಬಿ. ಲೋಕುರ್ ಹಾಗೂ ದೀಪಕ್ ಗುಪ್ತಾ ನೇತೃತ್ವದ ಪೀಠವು ಈ ರೀತಿಯಾಗಿ ತನ್ನ ಅಸಮಾಧಾನವನ್ನು ಹೊರಹಾಕಿದೆ. ದಿಲ್ಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್)ನಲ್ಲಿನ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಪೀಠವು, ಈ ನಿರ್ಲಕ್ಷ ಧೋರಣೆಗಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ 25,000 ರೂ. ದಂಡ ವಿಧಿಸಿದೆ.
ನಗರದ ಹಲವೆಡೆ ಉಂಟಾಗುವ ರಸ್ತೆಗಳಲ್ಲಿ ವಾಹನದಟ್ಟಣೆಯನ್ನು ಕಡಿಮೆ ಮಾಡುವಂತೆ ಸೂಚಿಸಿ ನ್ಯಾಯಾಲಯ ನೀಡಿರುವ ಆದೇಶದ ಬಗ್ಗೆ ಯಾವುದೇ ವರದಿಯನ್ನು ಒಪ್ಪಿಸದ ದಿಲ್ಲಿ ಸರಕಾರ ಮೇಲೆಯೂ ನ್ಯಾಯಪೀಠವು ಒಂದು ಲಕ್ಷ ರೂ. ದಂಡ ವಿಧಿಸಿದೆ. ಎಮ್‌ಒಇಎಫ್‌ಆ್ಯಂಡ್‌ಸಿಸಿ ಪರವಾಗಿ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎ.ಎನ್.ಎಸ್ ನದ್ಕರ್ನಿ, ಪೆಟ್ರೋಲಿಯಂ ಸಚಿವಾಲಯವು ರವಿವಾರವಷ್ಟೇ ನಮಗೆ ನಿಷೇಧದ ಬಗ್ಗೆ ತಿಳಿಸಿದ್ದಾರೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಸಚಿವಾಲಯದ ಮೇಲೆ ಹರಿಹಾಯ್ದ ನ್ಯಾಯಪೀಠವು, “ಪೆಟ್ರೋಲಿಯಂ ಸಚಿವಾಲಯವೇನು ದೇವರೇ?” ಅವರಿಗೆ ಬೇಕಾದಾಗ ಅವರು ಪ್ರತಿಕ್ರಿಯೆ ನೀಡುತ್ತಾರೆಯೇ?, ಅವರ ಹೆಸರನ್ನು ಪೆಟ್ರೋಲಿಯಂ ಸಚಿವಾಲಯದಿಂದ ದೇವರು ಎಂದು ಬದಲಿಸುವಂತೆ ತಿಳಿಸಿ ಎಂದು ಖಾರವಾಗಿ ನುಡಿದಿದೆ. ಅಲ್ಲಿಗೇ ನಿಲ್ಲಿಸಿದ ಪೀಠವು, “ಪೆಟ್ರೋಲಿಯಂ ಸಚಿವಾಲಯ ಸರಕಾರಕ್ಕೂ ಮಿಗಿಲೇ?, ಅಷ್ಟಕ್ಕೂ ಆ ಸಚಿವಾಲಯದ ಸ್ಥಾನ ಯಾವುದು?, ಅವರು ಯಾವುದೇ ಆದೇಶವನ್ನು ಯಾಕೆ ಪಾಲಿಸುವುದಿಲ್ಲ?” ಎಂದು ಪ್ರಶ್ನಿಸಿದೆ.