ಅಪಹೃತ ಆರ್‌ಜೆಡಿ ನಾಯಕನ ರುಂಡವಿಲ್ಲದ ದೇಹ ಪತ್ತೆ
ನಲಂದಾ, ಜು.10: ರಾಷ್ಟ್ರೀಯ ಜನತಾದಳ (ಆರ್‌ಜೆಡಿ)ದ ನವಾಡಾ ಜಿಲ್ಲಾ ಕಾರ್ಯದರ್ಶಿ ಕೈಲಾಶ್ ಪಾಸ್ವಾನ್ ಮೃತದೇಹವು ನಲಂದಾದ ಖುದಾಗಂಜ್‌ನಲ್ಲಿ ರುಂಡವಿಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಾಸ್ವಾನ್‌ರನ್ನು ಜುಲೈ 6ರಂದು ಅಪಹರಣ ಮಾಡಲಾಗಿತ್ತು. ಇದಾಗಿ ಒಂದು ದಿನದ ನಂತರ ಅವರ ಮೃತದೇಹ ದೊರೆತಿದೆ. ಮೃತದೇಹದ ಮೇಲಿದ್ದ ಬಟ್ಟೆ ಹಾಗೂ ಇತರ ವೈಯಕ್ತಿಕ ವಸ್ತುಗಳಿಂದ ಗುರುತು ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹತ್ಯೆಯಲ್ಲಿ ಇನ್ನೋರ್ವ ಆರ್‌ಜೆಡಿ ನಾಯಕ ಚೋಟು ಗುಪ್ತಾನ ಹೆಸರುಗಳು ಕೇಳಿಬರುತ್ತಿದ್ದರೂ ಪೊಲೀಸರು ಈವರೆಗೆ ಯಾರನ್ನೂ ಬಂಧಿಸಿಲ್ಲ. ಪಾಸ್ವಾನ್ ಕುಟುಂಬಿಕರು ತಿಳಿಸುವಂತೆ, ನವಾಡದ ಬುಚ್ಚಿ ಗ್ರಾಮದ ನಿವಾಸಿ ಆರ್‌ಜೆಡಿ ನಾಯಕ ಚೋಟು ಗುಪ್ತಾ ಪಂಚಾಯತ್ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಪಾಸ್ವಾನ್‌ರನ್ನು ತಮ್ಮ ವಾಹನದಲ್ಲಿ ಕರೆದೊಯ್ದಿದ್ದರು. ಅಲ್ಲಿಂದಲೇ ಪಾಸ್ವಾನ್‌ರನ್ನು ಅಪಹರಣ ಮಾಡಲಾಗಿತ್ತು. ಪಾಸ್ವಾನ್ ಪುತ್ರ ತನ್ನ ತಂದೆ ಅಪಹರಣವಾಗಿರುವ ಬಗ್ಗೆ ನವಾಡಾ ಪೊಲೀಸ್ ಠಾಣೆಯಲ್ಲಿ ಜುಲೈ 8ರಂದು ದೂರು ದಾಖಲಿಸಿದ್ದರು. ಇದೀಗ ಪೊಲೀಸರು ಹತ್ಯಾ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಚೋಟು ಗುಪ್ತಾ ಜೊತೆಗೆ ಎನ್‌ಜಿಒದಲ್ಲಿ ಕೆಲಸ ಮಾಡುವ ಓರ್ವ ಮಹಿಳೆ ಹಾಗೂ ಪಾಸ್ವಾನ್‌ರ ಎರಡನೇ ಪತ್ನಿ ಎಂದು ಹೇಳಿಕೊಳ್ಳುತ್ತಿರುವ ಇನ್ನೋರ್ವ ಮಹಿಳೆಯ ಕೈವಾಡವಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಮೂರು ಆರ್‌ಜೆಡಿ ನಾಯಕರನ್ನು ಹತ್ಯೆ ಮಾಡಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.