ವ್ಯವಹಾರಸ್ನೇಹಿ ಪಟ್ಟಿಯಲ್ಲಿ ಆಂಧ್ರ ಪ್ರದೇಶಕ್ಕೆ ಅಗ್ರಸ್ಥಾನ

Update: 2018-07-10 15:33 GMT

ಹೊಸದಿಲ್ಲಿ, ಜು.10: ವಿಶ್ವಬ್ಯಾಂಕ್ ಮತ್ತು ಕೈಗಾರಿಕಾ ನೀತಿ ಮತ್ತು ಪ್ರೋತ್ಸಾಹ ಇಲಾಖೆ (ಡಿಐಪಿಪಿ) ಬಿಡುಗಡೆ ಮಾಡಿರುವ ವ್ಯವಹಾರಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶ ಶೇ. 98.42 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಶೇ. 96.40 ಅಂಕಗಳನ್ನು ಪಡೆದುಕೊಂಡಿರುವ ಕರ್ನಾಟಕ ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದು, ಪರಿಸರ ನೋಂದಾವಣಿಯಲ್ಲಿ ಮುಂಚೂಣಿಯಲ್ಲಿದೆ.

ಉಳಿದಂತೆ ಜಾರ್ಖಂಡ್ ನಾಲ್ಕನೇ ಸ್ಥಾನ, ಗುಜರಾತ್ ಐದು, ಚತ್ತೀಸ್‌ಗಡ ಆರು, ಮಧ್ಯಪ್ರದೇಶ ಏಳು, ಕರ್ನಾಟಕ ಎಂಟು, ರಾಜಸ್ಥಾನ ಒಂಬತ್ತು ಮತ್ತು ಪಶ್ಚಿಮ ಬಂಗಾಳ ಹತ್ತನೇ ಸ್ಥಾನದಲ್ಲಿದೆ.

ಕಳೆದ ವರ್ಷ ಆಂಧ್ರ ಪ್ರದೇಶದ ಜೊತೆ ಅಗ್ರಸ್ಥಾನವನ್ನು ಹಂಚಿಕೊಂಡಿದ್ದ ತೆಲಂಗಾಣ ಈ ಬಾರಿ ಶೇ.98.33 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಶೇ. 98.07 ಅಂಕಗಳೊಂದಿಗೆ ಹರ್ಯಾಣ ಮೂರನೇ ಸ್ಥಾನದಲ್ಲಿದೆ. ಹೂಡಿಕೆಯನ್ನು ಆಕರ್ಷಿಸಲು ಮತ್ತು ವ್ಯವಹಾರ ನಡೆಸುವ ಸ್ಥಿತಿಯನ್ನು ಉತ್ತಮಗೊಳಿಸಲು ರಾಜ್ಯಗಳ ನಡುವೆ ಸ್ಪರ್ಧೆ ನಡೆಯಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಕಳೆದ ವರ್ಷ ರಾಜ್ಯಗಳಿಗೆ ಅಂಕಗಳನ್ನು ನೀಡುವ ಕ್ರಮವನ್ನು ಪರಿಚಯಿಸಿತ್ತು. ವ್ಯವಹಾರಸ್ನೇಹಿ ಅಂಕ ನೀಡುವಲ್ಲಿ ನಿರ್ಮಾಣ ಪರವಾನಿಗೆ, ಕಾರ್ಮಿಕ ನಿಯಂತ್ರಣ, ಪರಿಸರ ನೋಂದಾವಣಿ, ಮಾಹಿತಿ ಲಭ್ಯತೆ, ಜಮೀನು ಲಭ್ಯತೆ ಹಾಗೂ ಏಕಗವಾಕ್ಷಿ ವ್ಯವಸ್ಥೆ ಮುಂತಾದ ಅಂಶಗಳನ್ನು ಗಮನಿಸಲಾಗುತ್ತದೆ. ಭ್ರಷ್ಟಾಚಾರ ಈಗಲೂ ಭಾರತದಲ್ಲಿ ಉದ್ಯಮಿಗಳು ಎದುರಿಸಬೇಕಾದ ದೊಡ್ಡ ಸಮಸ್ಯೆಯಾಗಿದೆ ಎಂದು 2017ರ ಬಿಆರ್‌ಎಪಿ ವರದಿಯು ತಿಳಿಸಿದೆ.

ಬಿಆರ್‌ಎಪಿ ಅಡಿಯಲ್ಲಿ ಮಾಡಲಾಗುವ ಮೌಲ್ಯಮಾಪನವು ರಾಜ್ಯಗಳು ತಮ್ಮ ಜಾಲತಾಣಗಳಲ್ಲಿ ಹಾಕುವ ಮಾಹಿತಿ ಆಧಾರಿತ ಸುಧಾರಣಾ ಸಾಕ್ಷಿ ಹಾಗೂ ಉದ್ಯಮಿಗಳಿಗೆ ನೀಡಲಾದ ಸೇವೆಗಳ ಬಳಕೆದಾರರಿಂದ ಪಡೆಯಲಾದ ಪ್ರತಿಕ್ರಿಯಾ ಅಂಕ (ಫೀಡ್‌ಬ್ಯಾಕ್) ವನ್ನು ಆಧರಿಸಿರುತ್ತದೆ. ಸದ್ಯ 17 ರಾಜ್ಯಗಳು ಸುಧಾರಣಾ ಸಾಕ್ಷಿಯಲ್ಲಿ ಶೇ. 90 ಅಂಕ ಗಳಿಸಿದ್ದರೆ 15 ರಾಜ್ಯಗಳು ಶೇ. 90 ಹಾಗೂ ಹೆಚ್ಚಿನ ಒಟ್ಟಾರೆ ಅಂಕವನ್ನು ಗಳಿಸಿವೆ ಎಂದು ಡಿಐಪಿಪಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News