ಭಾರತೀಯರು ಹೆಚ್ಚು ಒತ್ತಡಕ್ಕೊಳಗಾಗುತ್ತಾರೆ: ಸಮೀಕ್ಷಾ ವರದಿ
ಮುಂಬೈ, ಜು.10: ಭಾರತೀಯರಲ್ಲಿ ಒತ್ತಡದ ಮಟ್ಟ ಅತ್ಯಧಿಕವಾಗಿದ್ದು ದೈನಂದಿನ ಬದುಕಿನಲ್ಲಿ ಅತೀ ಹೆಚ್ಚು ಒತ್ತಡಕ್ಕೊಳಗಾಗುವವರು ಭಾರತೀಯರು ಎಂದು ಜಾಗತಿಕ ಸಮೀಕ್ಷೆಯ ವರದಿ ತಿಳಿಸಿದೆ. ಜಾಗತಿಕವಾಗಿ ಒತ್ತಡದ ಮಟ್ಟ ಶೇ.86 ಆಗಿದ್ದರೆ, ಆರ್ಥಿಕ ಮುಗ್ಗಟ್ಟು, ಉದ್ಯೋಗದ ಚಿಂತೆ ಸೇರಿದಂತೆ ಭಾರತದ ಶೇ.89ರಷ್ಟು ಜನತೆ ಸದಾ ಒತ್ತಡದಲ್ಲಿ ಇರುತ್ತಾರೆ. ಇತರ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಬ್ರೆಝಿಲ್, ಚೀನಾ, ಇಂಡೋನೇಶಿಯಾದ ಒತ್ತಡದ ಮಟ್ಟ ಭಾರತಕ್ಕಿಂತ ಕಡಿಮೆಯಾಗಿದೆ.
ಜೊತೆಗೆ, 8ರಲ್ಲಿ ಓರ್ವ ಭಾರತೀಯ ಒತ್ತಡ ನಿಭಾಯಿಸುವಲ್ಲಿ ಸಮಸ್ಯೆ ಎದುರಿಸುತ್ತಾರೆ. ಅಲ್ಲದೆ ಸಮೀಕ್ಷೆಗೆ ಒಳಪಟ್ಟಿರುವವರ ಪೈಕಿ ಶೇ.75ರಷ್ಟು ಮಂದಿ ಒತ್ತಡ ನಿವಾರಣೆಗಾಗಿ ವೈದ್ಯರ ಸಲಹೆ ಪಡೆಯಲು ಆಸಕ್ತರಾಗಿಲ್ಲ(ವೈದ್ಯರ ಶುಲ್ಕ ದುಬಾರಿಯಾಗಿರುವುದು ಇದಕ್ಕೆ ಪ್ರಮುಖ ಕಾರಣ). 23 ದೇಶಗಳ ಸುಮಾರು 14,500 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು ದೈಹಿಕ ಆರೋಗ್ಯ, ಕುಟುಂಬ, ಸಾಮಾಜಿಕ ಸ್ಥಿತಿ ಗತಿ, ಆರ್ಥಿಕ ಸ್ಥಿತಿ ಹಾಗೂ ಉದ್ಯೋಗ- ಈ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.
ಕೆಲಸದ ಸ್ಥಳ ಅನುಕೂಲಕರವಾಗಿರಬೇಕು ಎಂದು ಶೇ.87ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ವೃದ್ಧಾಪ್ಯದ ಸಂದರ್ಭ ಉಳಿತಾಯದ ಹಣದಲ್ಲಿ ವೈದ್ಯಕೀಯ ವೆಚ್ಚ ಪಾವತಿಸಲು ಇಬ್ಬರಲ್ಲಿ ಒಬ್ಬ ವ್ಯಕ್ತಿ ಒಲವು ಹೊಂದಿದ್ದರೆ, 10ರಲ್ಲಿ 4 ಭಾರತೀಯರು ಆರೋಗ್ಯ ವಿಮಾ ಸೇವೆಯ ಮೊರೆ ಹೋಗಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಸುಮಾರು ಶೇ.90ರಷ್ಟು ಮಂದಿ ಆರೋಗ್ಯಸೇವೆಯ ಮಾಹಿತಿಯನ್ನು ಹಂಚಿಕೊಳ್ಳಲು ಸಿದ್ಧ ಎಂದು ತಿಳಿಸಿದ್ದಾರೆ.