ಜೂನ್‌ನಲ್ಲಿ ಗ್ರಾಹಕ ಹಣದುಬ್ಬರ ಶೇ.5ಕ್ಕೆ ಏರಿಕೆ; ಕೈಗಾರಿಕಾ ಉತ್ಪಾದನೆ ಶೇ.3.2ಕ್ಕೆ ಕುಸಿತ

Update: 2018-07-12 15:50 GMT

ಹೊಸದಿಲ್ಲಿ, ಜು.12: ಗ್ರಾಹಕ ಹಣದುಬ್ಬರವು ಮೇ ತಿಂಗಳಲ್ಲಿದ್ದ ಶೇ.4.87ನ್ನು ದಾಟಿ ಜೂನ್ ವೇಳೆಗೆ ಶೇ.5ಕ್ಕೆ ತಲುಪಿದೆ ಎಂದು ಗುರುವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳು ತಿಳಿಸಿವೆ.

ಕಚ್ಚಾತೈಲದ ಬೆಲೆಯಲ್ಲಿ ಉಂಟಾದ ಏರಿಕೆಯ ಪರಿಣಾಮ ತೈಲ ಬೆಲೆಗಳಲ್ಲಿ ಉಂಟಾಗಿರುವ ನೆಗೆತ ಮತ್ತು ಯುಎಸ್ ಡಾಲರ್ ವಿರುದ್ಧ ರೂಪಾಯಿ ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಹಣದುಬ್ಬರ ಏರಿಕೆಯಾಗಿದೆ ಎಂದು ಅರ್ಥಶಾಸ್ತ್ರಜ್ಞರು ತಿಳಿಸಿದ್ದಾರೆ. ಸತತ ಎಂಟನೇ ತಿಂಗಳು ಕೂಡಾ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಧ್ಯಾವಧಿ ಗುರಿಯಾದ ಶೇ.4ಕ್ಕಿಂತ ಮೇಲಿದೆ ಎಂದು ತಜ್ಞರು ತಿಳಿಸಿದ್ದಾರೆ. ರೆಪೊ ದರದಲ್ಲಿ 25 ಬೇಸಿಸ್ ಪಾಯಿಂಟ್ ಅಥವಾ ಶೇ.0.25 ಏರಿಕೆ ಮಾಡುವುದಾಗಿ ಕಳೆದ ತಿಂಗಳು ಆರ್‌ಬಿಐ ಘೋಷಿಸಿತ್ತು. ವಾಣಿಜ್ಯ ಬ್ಯಾಂಕ್‌ಗಳಿಗೆ ನೀಡುವ ಸಾಲಕ್ಕೆ ಆರ್‌ಬಿಐ ನಿಗದಿ ಮಾಡುವ ಬಡ್ಡಿಯನ್ನು ರೆಪೊ ದರ ಎಂದು ಕರೆಯಲಾಗುತ್ತದೆ.

ಇದೇ ವೇಳೆ ಮೇ ತಿಂಗಳಲ್ಲಿ ಶೇ.3.37 ಇದ್ದ ಆಹಾರ ಹಣದುಬ್ಬರವು ಜೂನ್‌ನಲ್ಲಿ ಶೇ.3.18ಕ್ಕೆ ಇಳಿದಿದೆ. ತರಕಾರಿ ಮತ್ತು ಹಣ್ಣುಗಳ ಬೆಲೆಯಲ್ಲಿ ಗಣನೀಯ ಬದಲಾವಣೆಯಾಗದಿರುವುದು ಆಹಾರ ಹಣದುಬ್ಬರದಲ್ಲಿ ಇಳಿಕೆಯಾಗಲು ಕಾರಣವಾಗಿದೆ. ನಿಗದಿತ ಸಮಯದಲ್ಲಿ ಬಿತ್ತನೆ ಮತ್ತು ಬೆಳೆ ಕೊಯ್ಲಿನ ದೃಷ್ಟಿಯಿಂದ ಸದ್ಯ ಆರಂಭವಾಗಿರುವ ಮಾನ್ಸೂನ್ ಪ್ರಮಖ ಪಾತ್ರವಹಿಸುತ್ತದೆ. ಈ ಅಂಶಗಳು ಕನಿಷ್ಟ ಬೆಂಬಲ ಬೆಲೆರಹಿತ ಬೆಳೆಗಳ ಬೆಲೆಗಳನ್ನು ನಿಯಂತ್ರಿಸುವಲ್ಲೂ ಮುಖ್ಯವಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News