ಬಂಧನದಲ್ಲಿರುವ ಬಾಂಗ್ಲಾದೇಶದ ವಿಪಕ್ಷ ನಾಯಕಿ ಖಲೀದಾರ ವಕೀಲರಿಗೆ ಪ್ರವೇಶ ನಿರಾಕರಿಸಿದ ಭಾರತ

Update: 2018-07-12 15:56 GMT

ಹೊಸದಿಲ್ಲಿ,ಜು.12: ಬಂಧನದಲ್ಲಿರುವ ಬಾಂಗ್ಲಾದೇಶದ ವಿಪಕ್ಷ ನಾಯಕಿ ಖಲೀದಾ ಝಿಯಾ ಅವರ ಕಾನೂನು ಸಲಹೆಗಾರರಾಗಿರುವ ಬ್ರಿಟಿಷ್ ಪ್ರಜೆ ಲಾರ್ಡ್ ಅಲೆಕ್ಸಾಂಡರ್ ಕಾರ್ಲಿಲೆ ಅವರು ಬುಧವಾರ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರಾದರೂ,ಸೂಕ್ತ ಭಾರತೀಯ ವೀಸಾವನ್ನು ಹೊಂದಿರಲಿಲ್ಲ ಎಂಬ ಕಾರಣದಿಂದ ಭಾರತವು ಅವರಿಗೆ ದೇಶದೊಳಗೆ ಪ್ರವೇಶವನ್ನು ನಿರಾಕರಿಸಿದೆ.

ಖಲೀದಾರ ವಿರುದ್ಧದ ಆರೋಪಗಳನ್ನು ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‌ಪಿ)ಯು ಆಧಾರರಹಿತವೆಂದು ಬಣ್ಣಿಸಿದ್ದು,ಇವುಗಳನ್ನು ಪ್ರಮುಖವಾಗಿ ಬಿಂಬಿಸಿ ಸುದ್ದಿಗೋಷ್ಠಿಯಲ್ಲಿ ಅಂತರರಾಷ್ಟ್ರೀಯ ಮಾಧ್ಯಮಗಳೆದುರು ಮಾತನಾಡಲು ಕಾರ್ಲೆಲಿ ದಿಲ್ಲಿಗೆ ಆಗಮಿಸಿದ್ದರು. ಢಾಕಾಕ್ಕೆ ಆಗಮಿಸಲು ಅವರಿಗೆ ಅನುಮತಿ ಸಿಕ್ಕಿರಲಿಲ್ಲ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ಭಾರತದಲ್ಲಿ ಕಾರ್ಲೆಲಿಯವರ ಉದ್ದೇಶಿತ ಚಟುವಟಿಕೆಯು ಅವರು ತನ್ನ ವೀಸಾ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಭೇಟಿಯ ಉದ್ದೇಶಕ್ಕೆ ಅನುಗುಣವಾಗಿರಲಿಲ್ಲ. ಹೀಗಾಗಿ ಅವರು ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಅವರಿಗೆ ದೇಶದಲ್ಲಿ ಪ್ರವೇಶವನ್ನು ನಿರಾಕರಿಸಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಝಿಯಾ ಅನಾಥಾಶ್ರಮ ಟ್ರಸ್ಟ್ ಲಂಚ ಪ್ರಕರಣದಲ್ಲಿ ಕಳೆದ ಫೆಬ್ರವರಿಯಲ್ಲಿ ಶಿಕ್ಷೆಗೊಳಗಾದ ನಂತರ ಜೈಲಿನಲ್ಲಿರುವ ಖಲೀದಾ ಸುಮಾರು ಮೂರು ಡಝನ್‌ಗೂ ಅಧಿಕ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News