ಸಾಮಾಜಿಕ ಮಾದ್ಯಮ ಕೇಂದ್ರ ಸ್ಥಾಪನೆಗೆ ಸುಪ್ರೀಂಕೋರ್ಟ್ ಆಕ್ಷೇಪ
ಹೊಸದಿಲ್ಲಿ, ಜು. 13: ಆನ್‌ಲೈನ್ ಡಾಟಾಗಳ ಬಗ್ಗೆ ನಿಗಾ ಇರಿಸಲು ಸಾಮಾಜಿಕ ಮಾಧ್ಯಮ ಕೇಂದ್ರ ಸ್ಥಾಪಿಸುವ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾವಲಯದ ನಿರ್ಧಾರದ ಬಗ್ಗೆ ಶುಕ್ರವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇದು ‘‘ಕಣ್ಗಾವಲು ಪರಿಸ್ಥಿತಿ ಸೃಸ್ಟಿಸಿದೆ” ಎಂದು ಪ್ರತಿಪಾದಿಸಿದೆ.
ನಾಗರಿಕರ ವ್ಯಾಟ್ಸ್ ಆ್ಯಪ್ ಸಂದೇಶಗಳ ಬಗ್ಗೆ ಕಣ್ಗಾವಲು ಇರಿಸಲು ಸರಕಾರ ಬಯಸುತ್ತಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಒಂದು ವಾರಗಳ ಒಳಗೆ ಪ್ರತಿಕ್ರಿಯೆ ದಾಖಲಿಸುವಂತೆ ಸರಕಾರಕ್ಕೆ ಸೂಚಿಸಿದೆ. ತೃಣಮೂಲ ಕಾಂಗ್ರೆಸ್ ಶಾಸಕ ಮಹುವಾ ಮೊಯಿತ್ರಾ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ. ಕಾನ್ವಿಲ್ಕರ್, ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಕೇಂದ್ರಕ್ಕೆ ನೋಟಿಸು ನೀಡಿದೆ ಹಾಗೂ ಈ ವಿಷಯದ ಕುರಿತು ನ್ಯಾಯಾಲಯಕ್ಕೆ ನೆರವು ನೀಡುವಂತೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರಿಗೆ ಸೂಚಿಸಿದೆ.
‘‘ನಾಗರಿಕರ ವ್ಯಾಟ್ಸ್‌ಆ್ಯಪ್ ಸಂದೇಶಗಳ ಬಗ್ಗೆ ನಿಗಾ ವಹಿಸಲು ಸರಕಾರ ಬಯಸುತ್ತಿದೆ. ಇದು ಕಣ್ಗಾವಲು ಪರಿಸ್ಥಿತಿ ಸೃಸ್ಟಿಸಿದೆ’’ ಎಂದು ಪೀಠ ಹೇಳಿದೆ. ಸರಕಾರ ಪ್ರಸ್ತಾಪ ಆಹ್ವಾನಿಸಿದೆ ಹಾಗೂ ಆಗಸ್ಟ್ 20ರಂದು ಟೆಂಡರ್ ಕರೆಯಲಾಗವುದು ಎಂದು ಮೊಯಿತ್ರಾ ಪರ ಹಾಜರಾದ ಹಿರಿಯ ವಕೀಲ ಎ.ಎಂ. ಸಿಂಘ್ವಿ ಹೇಳಿದ್ದಾರೆ. ಈ ಸಾಮಾಜಿಕ ಮಾಧ್ಯಮ ಕೇಂದ್ರದ ಮೂಲಕ ಸಾಮಾಜಿಕ ಮಾಧ್ಯಮ ಸಂದೇಶಗಳ ಬಗ್ಗೆ ನಿಗಾ ಇಡಲು ಸರಕಾರ ಬಯಸುತ್ತಿದೆ ಎಂದು ಸಿಂಘ್ವಿ ಹೇಳಿದರು. ಆಗಸ್ಟ್ 20ರಂದು ಟೆಂಡರ್ ಕರೆಯುವ ಮುನ್ನ ಅಂದರೆ, ಆಗಸ್ಟ್ 3ರಂದು ಈ ಪ್ರಕರಣದ ವಿಚಾರಣೆ ನಡೆಸಲಾಗುವುದು ಹಾಗೂ ಈ ವಿಷಯದಲ್ಲಿ ಅಟಾರ್ನಿ ಜನರಲ್ ಅಥವಾ ಸರಕಾರದ ಯಾವುದೇ ಕಾನೂನು ಅಧಿಕಾರಿ ನ್ಯಾಯಾಲಯಕ್ಕೆ ನೆರವು ನೀಡಬೇಕು ಎಂದು ಪೀಠ ಹೇಳಿದೆ.