ಮೋದಿಯನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಝಿಯಾವುಲ್ ಹಕ್‌ಗೆ ಹೋಲಿಸಿದ ದಿಗ್ವಿಜಯ್ ಸಿಂಗ್

Update: 2018-07-13 15:32 GMT

ಅಲಿರಾಜಪುರ್ (ಮ.ಪ್ರ), ಜು.13: ಬಿಜೆಪಿ ಮತ್ತೆ ಗೆದ್ದುಬಂದರೆ ಭಾರತವು ಹಿಂದೂ ಪಾಕಿಸ್ತಾನವಾಗಲಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿಕೆ ನೀಡಿರುವ ಬೆನ್ನಿಗೇ ಕಾಂಗ್ರೆಸ್‌ನ ಇನ್ನೋರ್ವ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಧಾರ್ಮಿಕ ತೀವ್ರವಾದಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿರುವ ದಿಗ್ವಿಜಯ್ ಸಿಂಗ್, ಮೋದಿಯನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಝಿಯಾವುಲ್ ಹಕ್ ಗೆ ಹೋಲಿಸಿದ್ದಾರೆ.

ತೀವ್ರವಾದವು ಉಗ್ರವಾದಕ್ಕೆ ಜನ್ಮ ನೀಡುತ್ತದೆ ಎಂಬುದರತ್ತ ಬೆಟ್ಟು ಮಾಡಿದ ಸಿಂಗ್, ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಝಿಯಾವುಲ್ ಹಕ್ ಪಾಕಿಸ್ತಾನದಲ್ಲಿ ಧಾರ್ಮಿಕ ತೀವ್ರವಾದಕ್ಕೆ ಪ್ರೋತ್ಸಾಹ ನೀಡುವ ಮೂಲಕ ಸಂಘರ್ಷಕ್ಕೆ ದಾರಿ ಮಾಡಿದ್ದರು. ಇದೇ ರೀತಿಯಲ್ಲಿ ಭಾರತದಲ್ಲಿ ನರೇಂದ್ರ ಮೋದಿ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ತೀವ್ರವಾದವು ಉಗ್ರವಾದಕ್ಕೆ ನಾಂದಿ ಹಾಡುತ್ತದೆ. ಪಾಕಿಸ್ತಾನದಲ್ಲಿ ಝಿಯಾವುಲ್ ಹಕ್ ವರು ಧಾರ್ಮಿಕ ತೀವ್ರವಾದಕ್ಕೆ ಪ್ರೋತ್ಸಾಹ ನೀಡಿದ ಕಾರಣ ಅಲ್ಲಿ ಉಗ್ರವಾದ ಹೆಚ್ಚಾಯಿತು. ಭಾರತದಲ್ಲಿ ಆಡಳಿತಾರೂಢ ಸರಕಾರವು ಹಿಂದುತ್ವ ಎಂಬ ಧಾರ್ಮಿಕ ತೀವ್ರವಾದಕ್ಕೆ ಪ್ರೋತ್ಸಾಹ ನೀಡುತ್ತಿದೆ. ಇದು ಒಂದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಪಾಕಿಸ್ತಾನದಲ್ಲಿ ಝಿಯಾವುಲ್ ಹಕ್ ಜಮಾಅತೆ ಇಸ್ಲಾಮಿಯಂಥ ಸಂಘಟನೆಗಳಿಗೆ ಪ್ರಾಮುಖ್ಯತೆ ನೀಡಿದರು. ಅವರು ತಾಲಿಬಾನ್‌ನಂಥ ಸಂಘಟನೆಗಳನ್ನು ಬೆಂಬಲಿಸಿದ ಪರಿಣಾಮ ಅಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾದವು. ಪಾಕಿಸ್ತಾನದಲ್ಲಿ ಹೆಚ್ಚು ಬಾಂಬ್ ಸ್ಫೋಟಗಳು ನಡೆಯುತ್ತವೆ, ಇವುಗಳನ್ನು ಮಾಡುವವರು ಯಾರು? ಅವರೇನೂ ವಿದೇಶಿಗರಲ್ಲ, ಅವರೆಲ್ಲ ಪಾಕಿಸ್ತಾನಿಗಳೇ. ಇನ್ನು ಸಾಯುವವರು ಯಾರು? ಮುಸ್ಲಿಮರೇ ಹೊರತು ಬೇರಾರೂ ಅಲ್ಲ ಎಂದು ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News