×
Ad

ಪಾಕ್ ಮಾಜಿ ಪ್ರಧಾನಿ ನವಾಝ್ ಶರೀಫ್ ಬಂಧನ

Update: 2018-07-13 22:38 IST

ಲಾಹೋರ್, ಜು.13: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಹಾಗೂ ಅವರ ಮಗಳು ಮರಿಯಮ್ ಶುಕ್ರವಾರದಂದು ಪಾಕಿಸ್ತಾನಕ್ಕೆ ಮರಳಿದ್ದು ಅವರನ್ನು ಲಾಹೋರ್‌ನಲ್ಲಿ ಬಂಧಿಸಲಾಗಿದೆ ಎಂದು ಮಧ್ಯಮಗಳು ವರದಿ ಮಾಡಿವೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ನ್ಯಾಯಾಲಯ ಶರೀಫ್ ಮತ್ತು ಮರಿಯಮ್ ಗೆ ಸುದೀರ್ಘ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಶರೀಫ್ ಮತ್ತು ಮರ್ಯಮ್ ಶುಕ್ರವಾರ ರಾತ್ರಿ 9.15ರ ಸುಮಾರಿಗೆ ಲಾಹೋರ್‌ನ ಅಲ್ಲಮ್ ಇಕ್ಬಾಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಭ್ರಷ್ಟಾಚಾರ ನಿಗ್ರಹ ಪಡೆಯ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲಂಡನ್‌ನಲ್ಲಿರುವ ಐಷಾರಾಮಿ ಫ್ಲಾಟ್‌ಗಳ ಮಾಲಕತ್ವಕ್ಕೆ ಸಂಬಂಧಿಸಿದ ಇವನ್‌ಫೀಲ್ಡ್ ಆಸ್ತಿ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ಶರೀಫ್‌ಗೆ ಹತ್ತು ವರ್ಷಗಳ ಜೈಲುಶಿಕ್ಷೆ ವಿಧಿಸಿದ್ದರೆ ಅವರ ಮಗಳು ಮರಿಯಮ್ ಗೆ ಏಳು ವರ್ಷಗಳ ಕಾರಾಗೃಹ ಶಿಕ್ಷೆ ನೀಡಿದೆ. ಶರೀಫ್ ಆಗಮನಕ್ಕೂ ಮುನ್ನ ಲಾಹೋರ್‌ನಲ್ಲಿ ಪೊಲೀಸರು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಝ್ ಪಕ್ಷದ ಸಾವಿರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರು ತಮ್ಮ ನಾಯಕನಿಗೆ ಶುಭಾಶಯ ಕೋರಲು ವಿಮಾನ ನಿಲ್ದಾಣಕ್ಕೆ ಆಗಮಿಸುವುದನ್ನು ತಡೆಯಲು ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ. ಪೊಲೀಸರ ಈ ಕ್ರಮವನ್ನು ವಿರೋಧಿಸಿರುವ ಶರೀಫ್ ಸೇನೆಯು ತನ್ನ ಮತ್ತು ತನ್ನ ಪಕ್ಷದ ವಿರುದ್ಧ ದ್ವೇಷಕಾರುತ್ತಿದೆ ಎಂದು ಆರೋಪಿಸಿದ್ದಾರೆ.

ಲಂಡನ್‌ನಿಂದ ಹೊರಡುವುದಕ್ಕೂ ಮುನ್ನ ಶರೀಫ್ ಅಲ್ಲಿನ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ತನ್ನ ತಾಯಿ ಬೇಗಂ ಕುಲ್ಸುಮ್ ಅವರಿಗೆ ಅಂತಿಮ ವಿದಾಯ ಹೇಳಿದ್ದಾರೆ.

ಇದಕ್ಕೂ ಮುನ್ನ ಶುಕ್ರವಾರ ಸಂಜೆ ಲಾಹೋರ್‌ಗೆ ಪ್ರವೇಶಿಸುವ ಹೆದ್ದಾರಿಯಲ್ಲಿ ಶರೀಫ್ ಬೆಂಬಲಿಗರು ಮತ್ತು ಪೊಲೀಸರ ಮಧ್ಯೆ ಸಂಘರ್ಷವೇರ್ಪಟ್ಟಿತು. ಲಾಹೋರ್‌ನಲ್ಲಿ ಶುಕ್ರವಾರ ಮಧ್ಯಾಹ್ನದಿಂದಲೇ ಮೊಬೈಲ್ ದೂರವಾಣಿ ಸೇವೆಯನ್ನು ಕಡಿತಗೊಳಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News