ಭಾರತದ ಬುಲೆಟ್ ರೈಲು ಯೋಜನೆಗೆ ಬಂಡವಾಳ ಪೂರೈಕೆ ಸ್ಥಗಿತಗೊಳಿಸಿದ ಜಪಾನ್

Update: 2018-07-14 14:43 GMT

 ಹೊಸದಿಲ್ಲಿ, ಜು.14: ಪ್ರಧಾನಿ ಮೋದಿಯ ಮಹಾತ್ವಾಕಾಂಕ್ಷಿ ಅಹ್ಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಗೆ ಅಗತ್ಯವಿರುವ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಯಲ್ಲಿ ಧನಸಹಾಯ ನೀಡುವುದನ್ನು ಜಪಾನ್ ಸ್ಥಗಿತಗೊಳಿಸಿದೆ. ಈ ತ್ರೈಮಾಸಿಕದಲ್ಲಿ ಈ ಯೋಜನೆಗೆ ಜಪಾನ್ ಅಂತರ್‌ರಾಷ್ಟ್ರೀಯ ಸಹಕಾರ ಸಂಸ್ಥೆ (ಜೆಐಸಿಎ) ಬಿಡುಗಡೆ ಮಾಡಬೇಕಾಗಿದ್ದ ಹಣ ಇನ್ನೂ ತಲುಪಿಲ್ಲ ಎಂದು ಗುಜರಾತ್ ಸರಕಾರದ ಮೂಲಗಳು ತಿಳಿಸಿವೆ ಎಂದು ಡಿಎನ್ ಎ ವರದಿ ಮಾಡಿದೆ. ಈ ಯೋಜನೆಯಲ್ಲಿ ಹಲವು ವಿವಾದಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಜೆಐಸಿ ಹಣ ಪೂರೈಕೆಯನ್ನು ಸ್ಥಗಿತಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಬುಲೆಟ್ ರೈಲಿಗೆ ಭೂಸ್ವಾಧೀನಪಡಿಸಿಕೊಳ್ಳಲು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸದ್ಯ ಯೋಜನೆಯಲ್ಲಿ ಯಾವುದೇ ಪ್ರಗತಿಯಾಗುತ್ತಿಲ್ಲ. ಈ ಯೋಜನೆಗೆ ಬಂಡವಾಳ ಪೂರೈಕೆಗೆ ಮಾಡಲಾಗಿರುವ ಒಪ್ಪಂದ ಶರತ್ತುಬದ್ಧವಾಗಿದ್ದು ಕಾರ್ಯ ಪ್ರಗತಿಯಲ್ಲಿದ್ದರೆ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತದೆ. ಮೊದಲ ಕಂತಿನಲ್ಲಿ 125 ಕೋಟಿ ರೂ.ವನ್ನು ಜಪಾನ್ ಪ್ರಧಾನಿ ಕಳೆದ ಸೆಪ್ಟೆಂಬರ್‌ನಲ್ಲಿ ಗುಜರಾತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ರಾಜ್ಯ ಸರಕಾರಗಳು ಭೂಸ್ವಾಧೀನ ವಿಷಯದಲ್ಲಿ ರೈತರ ಜೊತೆ ಮಾತುಕತೆ ನಡೆಸುತ್ತಿದೆ. ಯೋಜನೆಯಲ್ಲಿ ಯಾವುದೇ ಪ್ರಗತಿ ಕಾಣದೆ ಮುಂದಿನ ಕಂತಿನ ಹಣ ಬಿಡುಗಡೆಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಒಂದು ಲಕ್ಷ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೈಸ್ಪೀಡ್ ರೈಲು ಯೋಜನೆಗೆ ಜೆಐಸಿಎ 80,000 ಕೋಟಿ ರೂ. ನೀಡುತ್ತಿದೆ. ಈ ಯೋಜನೆಗೆ ನೀಡಲಾಗುವ ಮೊತ್ತವನ್ನು ಭಾರತವು ಜಪಾನ್‌ಗೆ ಮುಂದಿನ ಹದಿನೈದು ವರ್ಷಗಳಲ್ಲಿ ಮರುಪಾವತಿಸಬೇಕಿದೆ. ಯೋಜನೆಗೆ ಅಗತ್ಯವಿರುವ ಉಳಿದ 20,000 ಕೋಟಿ ರೂ.ವನ್ನು ಗುಜರಾತ್ ಮತ್ತು ಮಹಾರಾಷ್ಟ್ರ ಸರಕಾರಗಳು ಕಂತುಗಳಲ್ಲಿ ನೀಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News