ವಿಜಯ ಮಲ್ಯ ‘ಸ್ಮಾರ್ಟ್’ ಎಂದು ಬಣ್ಣಿಸಿದ್ದು ನನ್ನ ತಪ್ಪು: ಸಚಿವ ಒರಾಂ

Update: 2018-07-14 14:58 GMT

ಹೈದರಾಬಾದ್,ಜು.14: ಶುಕ್ರವಾರ ಹೈದರಾಬಾದ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಬುಡಕಟ್ಟು ಉದ್ಯಮಿಗಳ ಸಮಾವೇಶದಲ್ಲಿ ದೇಶಭ್ರಷ್ಟ ಮದ್ಯದ ದೊರೆ ವಿಜಯ ಮಲ್ಯರನ್ನು ‘ಸ್ಮಾರ್ಟ್’ ವ್ಯಕ್ತಿಯೆಂದು ಬಣ್ಣಿಸಿ,ಬುಡಕಟ್ಟು ಜನರನ್ನು ಉತ್ತೇಜಿಸಲು ಅವರನ್ನು ಉದಾಹರಿಸಿದ್ದ ಕೇಂದ್ರ ಸಚಿವ ಜುವಲ್ ಒರಾಂ ಅವರು,ತಾನು ಮಲ್ಯರ ಹೆಸರನ್ನು ಆಕಸ್ಮಿಕವಾಗಿ ಬಳಸಿದ್ದೆ ಎಂದು ಶನಿವಾರ ಸಮಜಾಯಿಷಿ ನೀಡಿದ್ದಾರೆ.

ತಾನು ಮಲ್ಯರ ಹೆಸರನ್ನು ಆಕಸ್ಮಿಕವಾಗಿ ಬಳಸಿದ್ದೆ. ತಾನು ಬೇರೆ ಯಾರದಾದರೂ ಹೆಸರು ಹೇಳಬೇಕಿತ್ತು. ತಾನು ಅವರ ಹೆಸರನ್ನು ಬಳಸಬಾರದಿತ್ತು. ಅದು ತನ್ನ ತಪ್ಪಾಗಿತ್ತು ಎಂದು ಸುದ್ದಿಸಂಸ್ಥೆಗೆ ಒರಾಂ ತಿಳಿಸಿದರು.

 ಸಮ್ಮೇಳನದಲ್ಲಿ ಮಾತನಾಡಿದ ಒರಾಂ,‘‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನರು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಪಡೆದಿದ್ದಾರಾದರೂ,ಜ್ಞಾನ ಮತ್ತು ಪ್ರತಿಭೆಗೆ ಸಂಬಂಧಿಸಿದಂತೆ ಅವರನ್ನು ಇತರರಿಗೆ ಸಮಾನವಾಗಿ ಪರಿಗಣಿಸಲಾಗುತ್ತಿಲ್ಲ. ನಾವು ಉದ್ಯಮಿಗಳಾಗಬೇಕು. ನಾವು ಬುದ್ಧಿವಂತರಾಗಬೇಕು. ನಾವು ಸ್ಮಾರ್ಟ್ ಆಗಬೇಕು. ನಾವು ಮಾಹಿತಿಯನ್ನು ಗಳಿಸಬೇಕು. ಮಾಹಿತಿ ಶಕ್ತಿಯಾಗಿದೆ. ಮಾಹಿತಿ ಇದ್ದವರು ಅಧಿಕಾರವನ್ನು ನಿಯಂತ್ರಿಸುತ್ತಾರೆ. ನೀವು ವಿಜಯ ಮಲ್ಯರನ್ನು ಟೀಕಿಸುತ್ತೀರಿ. ಆದರೆ ಅವರೇನು? ಅವರು ತುಂಬ ಸ್ಮಾರ್ಟ್ ವ್ಯಕ್ತಿ. ಅವರು ಕೆಲವು ಬುದ್ಧಿವಂತರನ್ನು ನೇಮಿಸಿಕೊಂಡಿದ್ದರು. ಅವರು ಬ್ಯಾಂಕುಗಳು,ರಾಜಕಾರಣಿಗಳು ಮತ್ತು ಸರಕಾರದೊಂದಿಗೆ ಅಲ್ಲಿ ಇಲ್ಲಿ ಏನೋ ಆಟವಾಡಿದ್ದರು. ಮಲ್ಯ ಅವರನ್ನು ಖರೀದಿಸಿದ್ದರು. ನೀವೂ ಸ್ಮಾರ್ಟ್ ಆಗದಂತೆ ನಿಮ್ಮನ್ಯಾರು ತಡೆದಿದ್ದಾರೆ? ವ್ಯವಸ್ಥೆಯ ಮೇಲೆ ಪ್ರಭಾವ ಬೀರದಂತೆ ಆದಿವಾಸಿಗಳಿಗೆ ಯಾರು ಹೇಳಿದ್ದಾರೆ? ಬ್ಯಾಂಕರ್‌ಗಳ ಮೇಲೆ ಪ್ರಭಾವ ಬೀರದಂತೆ ನಿಮ್ಮನ್ನು ಯಾರು ತಡೆದಿದ್ದಾರೆ ’’ಎಂದು ಪ್ರಶ್ನಿಸಿದ್ದರು.

ಸಮಾಜದಲ್ಲಿ ತಾರತಮ್ಯದ ಆತಂಕದಿಂದಾಗಿ ಕೆಲವು ಪರಿಶಿಷ್ಟರು ತಮ್ಮ ಅಡ್ಡಹೆಸರು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಆದರೆ ಈ ಕೆಲಸವನ್ನು ಖಂಡಿತ ಮಾಡಬಾರದು. ಪರಿಶಿಷ್ಟರು ಉದ್ಯೋಗ ಕೇಳುವವರಾಗಬಾರದು,ಉದ್ಯೋಗ ನೀಡುವವರಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ. ನಾವು ಅವರ ಬಯಕೆಯನ್ನು ಈಡೇರಿಸಬೇಕು. ಓರ್ವ ಸಚಿವನಾಗಿ ನಾನದನ್ನು ಮಾಡಲು ನಿರ್ಧರಿಸಿದ್ದೇನೆ ಎಂದೂ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News