ಉನ್ನತ ಶಿಕ್ಷಣ ಮಸೂದೆಗೆ ತಮಿಳುನಾಡು ವಿರೋಧ: ಯುಜಿಸಿ ರದ್ದುಗೊಳಿಸದಿರಲು ಆಗ್ರಹ

Update: 2018-07-14 15:54 GMT

ಚೆನ್ನೈ,ಜು.14: ಉನ್ನತ ಶಿಕ್ಷಣ ಆಯೋಗದ ರಚನೆಗಾಗಿ ಕೇಂದ್ರದ ಕರಡು ಮಸೂದೆಯನ್ನು ಶನಿವಾರ ಬಲವಾಗಿ ವಿರೋಧಿಸಿರುವ ತಮಿಳುನಾಡು ಸರಕಾರವು ಹಾಲಿ ಇರುವ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ) ವ್ಯವಸ್ಥೆಯನ್ನೇ ಮುಂದುವರಿಸುವಂತೆ ಆಗ್ರಹಿಸಿದೆ.

ಈಗಿನ ಯುಜಿಸಿ ವ್ಯವಸ್ಥೆಯು ನಿಯಂತ್ರಣ ಮತ್ತು ಹಣಕಾಸು ಅಧಿಕಾರಗಳೊಂದಿಗೆ ಉತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತಿದೆ. ಅದನ್ನು ರದ್ದುಗೊಳಿಸಿ ಕೇವಲ ನಿಯಂತ್ರಣಾಧಿಕಾರವನ್ನು ಹೊಂದಿರುವ ಭಾರತೀಯ ಉನ್ನತ ಶಿಕ್ಷಣ ಆಯೋಗವನ್ನು ರಚಿಸುವ ಅಗತ್ಯವಿಲ್ಲ ಎನ್ನುವುದು ತಮಿಳುನಾಡು ಸರಕಾರದ ಅಭಿಪ್ರಾಯವಾಗಿದೆ. ತಾನು ಸ್ವೀಕರಿಸುವ ಪ್ರಸ್ತಾವಗಳ ವಸ್ತುನಿಷ್ಠ ಮೌಲ್ಯಮಾಪನ ನಡೆಸುವ ಮತ್ತು ಪಾರದರ್ಶಕವಾಗಿ ಹಣಕಾಸು ಮಂಜೂರು ಮಾಡುವ ಅಗತ್ಯ ಸಾಮರ್ಥ್ಯವನ್ನು ಯುಜಿಸಿ ಹೊಂದಿದೆ ಎಂದು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಕರಡು ಮಸೂದೆಯಲ್ಲಿ ಹಣಕಾಸು ಮಂಜೂರು ಅಧಿಕಾರವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ(ಎಚ್‌ಆರ್‌ಡಿ) ಅಥವಾ ಇತರ ಸಂಸ್ಥೆಗೆ ವರ್ಗಾಯಿಸಲು ಪ್ರಸ್ತಾಪಿಸಲಾಗಿದೆ.

ಈ ಕ್ರಮದ ಕುರಿತು ರಾಜ್ಯ ಸರಕಾರದ ಬಲವಾದ ಆಕ್ಷೇಪ ಮತ್ತು ಆತಂಕವನ್ನು ತನ್ನ ಪತ್ರದಲ್ಲಿ ಧ್ವನಿಸಿರುವ ಪಳನಿಸ್ವಾಮಿ,ವಿವಿಧ ಸಚಿವಾಲಯಗಳಿಂದ ತಮಿಳುನಾಡಿಗೆ ಹಣ ಮಂಜೂರಾತಿಯು ಧನಾತ್ಮಕವಾಗಿರಲಿಲ್ಲ ಎನ್ನುವುದು ನಮ್ಮ ಅನುಭವವಾಗಿದೆ. ಹಣಕಾಸು ಅಧಿಕಾರವನ್ನು ಎಚ್‌ಆರ್‌ಡಿ ಸಚಿವಾಲಯಕ್ಕೆ ಒಪ್ಪಿಸಿದರೆ ಹಣಕಾಸು ಮಂಜೂರಾತಿ ಸ್ವರೂಪವು ಶೇ.100ರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ 60:40 ಅನುಪಾತಕ್ಕೆ ಬದಲಾಗುತ್ತದೆ ಎಂಬ ಆತಂಕ ನಮ್ಮದಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News