ಹಜ್ ಯಾತ್ರಾರ್ಥಿಗಳ ಪ್ರಥಮ ತಂಡಕ್ಕೆ ಬೀಳ್ಕೊಡುಗೆ

Update: 2018-07-14 15:05 GMT

ಹೊಸದಿಲ್ಲಿ, ಜು.14: ಹಜ್ ಯಾತ್ರೆಗೆ ತೆರಳುವ ಪ್ರಥಮ ಯಾತ್ರಿಕರ ತಂಡವು ಶನಿವಾರ ಹೊಸದಿಲ್ಲಿಯಿಂದ ಸೌದಿ ಅರೇಬಿಯಾಕ್ಕೆ ಮೂರು ವಿಮಾನಗಳಲ್ಲಿ ತೆರಳಿದ್ದು ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಅಲ್ಪಸಂಖ್ಯಾತ ವ್ಯವಹಾರ ಇಲಾಖೆಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಪ್ರಥಮ ತಂಡದಲ್ಲಿದ್ದ 1,200 ಯಾತ್ರಿಕರನ್ನು ಬೀಳ್ಕೊಟ್ಟರು.

ದಿಲ್ಲಿಯಿಂದ 1,200 ಯಾತ್ರಾರ್ಥಿಗಳಲ್ಲದೆ ಗಯಾದಿಂದ 450, ಗುವಾಹಟಿಯಿಂದ 269, ಲಕ್ನೊದಿಂದ 900, ಶ್ರೀನಗರದಿಂದ 1,020 ಯಾತ್ರಿಕರೂ ಶನಿವಾರ ಮದೀನಾಕ್ಕೆ ತೆರಳಿದ್ದಾರೆ. ಈ ಸಂದರ್ಭ ಮಾತನಾಡಿದ ಸಚಿವ ನಖ್ವಿ, 2018ರ ಹಜ್ ಯಾತ್ರೆಯನ್ನು ಹೊಸ ನೀತಿಯ ಅನ್ವಯ ಸಂಯೋಜಿಸಲಾಗಿದ್ದು ಸಂಪೂರ್ಣ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಿರುವುದಲ್ಲದೆ ಯಾತ್ರಾರ್ಥಿಗಳಿಗೆ ಹೆಚ್ಚಿನ ಸೌಕರ್ಯ ಒದಗಿಸಲಾಗಿದೆ. ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯವು ಸೌದಿ ಅರೇಬಿಯಾದ ಹಜ್ ಕಚೇರಿಯ ಸಹಕಾರದೊಂದಿಗೆ ಮತ್ತು ಭಾರತದ ಹಜ್ ಸಮಿತಿ ಹಾಗೂ ಇತರ ಸಮಿತಿಗಳ ನೆರವಿನಿಂದ ನಿಗದಿತ ಸಮಯಕ್ಕಿಂತ ಮೊದಲೇ ಎಲ್ಲಾ ಸಿದ್ಧತೆಗಳನ್ನೂ ಪೂರ್ಣಗೊಳಿಸಿದೆ ಎಂದರು. ಸಬ್ಸಿಡಿ ರದ್ದತಿಯಲ್ಲದೆ, ಸೌದಿ ಅರೇಬಿಯಾದಲ್ಲಿ ಹಲವು ಹೊಸದಾದ ತೆರಿಗೆಯನ್ನು ವಿಧಿಸಲಾಗಿದ್ದರೂ ಯಾತ್ರಾರ್ಥಿಗಳಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳುವುದಿಲ್ಲ ಎಂದ ಅವರು, ದೇಶಕ್ಕೆ ಸ್ವಾತಂತ್ರ ದೊರೆತ ಬಳಿಕ ಇದೇ ಪ್ರಥಮ ಬಾರಿಗೆ ದೇಶದಿಂದ 1,75,025 ಮುಸ್ಲಿಮರು ಹಜ್ ಯಾತ್ರೆಗೆ ತೆರಳುತ್ತಿದ್ದಾರೆ. ಇದರಲ್ಲಿ ಮಹಿಳೆಯರ ಪ್ರಮಾಣ ಶೇ.47ಕ್ಕೂ ಹೆಚ್ಚು. ಇವರಲ್ಲಿ ಕೆಲವರು ‘ಮೆಹ್ರಮ್’ ಅಥವಾ ಪುರುಷ ಸಂಗಾತಿ ಇಲ್ಲದೆ ಪ್ರಯಾಣಿಸುತ್ತಿರುವುದು ವಿಶೇಷವಾಗಿದೆ ಎಂದರು. ದಿಲ್ಲಿಯ ಕಂದಾಯ ಮತ್ತು ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್, ಭಾರತದ ಹಜ್ ಸಮಿತಿ ಅಧ್ಯಕ್ಷ ಚೌಧರಿ ಮೆಹಬೂಬ್ ಅಲಿ ಕೈಸರ್, ದಿಲ್ಲಿ ಹಜ್ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಮುಹಮ್ಮದ್ ಇಶ್ರಾಕ್ ಖಾನ್, ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ಈ ಸಂದರ್ಭ ಉಪಸ್ಥಿತರಿದ್ದರು. ಜುಲೈ 17ರಂದು ಕೋಲ್ಕತಾದಿಂದ, ಜುಲೈ 20ರಂದು ವಾರಾಣಸಿಯಿಂದ, ಜುಲೈ 21ರಂದು ಮಂಗಳೂರಿನಿಂದ, ಜುಲೈ 26ರಂದು ಗೋವಾದಿಂದ, ಜುಲೈ 29ರಂದು ಔರಂಗಾಬಾದ್, ಚೆನ್ನೈ, ಮುಂಬೈ ಮತ್ತು ನಾಗಪುರದಿಂದ, ಜುಲೈ 30ರಂದು ರಾಂಚಿಯಿಂದ, ಆಗಸ್ಟ್ 1ರಂದು ಅಹ್ಮದಾಬಾದ್, ಬೆಂಗಳೂರು, ಕೊಚ್ಚಿನ್, ಹೈದರಾಬಾದ್ ಮತ್ತು ಜೈಪುರದಿಂದ, ಆಗಸ್ಟ್ 3ರಂದು ಭೋಪಾಲದಿಂದ ಯಾತ್ರಿಕರು ಹಜ್ ಯಾತ್ರೆಗೆ ತೆರಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News