×
Ad

ಶಾಲಾ ಶುಲ್ಕ ಏರಿಕೆಗೆ ಶೇ.10ರ ಮಿತಿ ವಿಧಿಸಲು ಶಿಫಾರಸು

Update: 2018-07-14 20:36 IST

ಹೊಸದಿಲ್ಲಿ, ಜು.14: ಖಾಸಗಿ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶಾಲಾ ಶುಲ್ಕ ಏರಿಕೆಯನ್ನು ಪ್ರತೀ ವರ್ಷ ಶೇ.10ಕ್ಕೆ ನಿಗದಿಗೊಳಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗವು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಶಿಫಾರಸು ಮಾಡಿದೆ. ಪ್ರತೀ ವರ್ಷ ಶಾಲಾ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ಮಕ್ಕಳಿಗೆ ಕಿರುಕುಳ ಕೊಡಲಾಗುತ್ತಿದ್ದು ಕೆಲವೊಮ್ಮೆ ಒತ್ತಡ ತಾಳಲಾರದೆ ಮಕ್ಕಳು ಆತ್ಮಹತ್ಯೆ ನಡೆಸಲು ಮುಂದಾಗುತ್ತಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಈ ಶಿಫಾರಸು ಮಾಡಲಾಗಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ(ಎನ್‌ಸಿಪಿಸಿಆರ್) ದ ಸದಸ್ಯ ಪ್ರಿಯಾಂಕ್ ಕನುಂಗೊ ತಿಳಿಸಿದ್ದಾರೆ. ಅಲ್ಲದೆ ಶಾಲೆಗಳಲ್ಲಿ ಶುಲ್ಕ ಹೆಚ್ಚಳದ ಮೇಲೆ ನಿಗಾ ಇರಿಸಲು ಜಿಲ್ಲಾ ಶುಲ್ಕ ನಿಯಂತ್ರಣ ಪ್ರಾಧಿಕಾರ ಸ್ಥಾಪಿಸಲೂ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಶುಲ್ಕಕ್ಕೆ ಸಂಬಂಧಿಸಿ ಶಾಲೆಯ ಆಡಳಿತ ವರ್ಗ ಹಾಗೂ ಪೋಷಕರ ಮಧ್ಯೆ ವಾಗ್ವಾದ, ಜಗಳ ನಡೆದಾಗ ಅದು ಮಕ್ಕಳ ಮೇಲೆ ಮಾನಸಿಕ ಹಾಗೂ ಭಾವನಾತ್ಮಕ ಒತ್ತಡಕ್ಕೆ ಕಾರಣವಾಗುತ್ತದೆ. ಆದ್ದರಿಂದ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಮಾದರಿ ಶುಲ್ಕ ನಿಯಂತ್ರಣ ವ್ಯವಸ್ಥೆ ಸ್ಥಾಪಿಸಲು ಆಯೋಗ ಬಯಸಿದೆ ಎಂದವರು ತಿಳಿಸಿದ್ದಾರೆ. ದೇಶದ ಒಟ್ಟು ಶಾಲೆಗಳಲ್ಲಿ ಶೇ.23ರಷ್ಟು ಖಾಸಗಿ ಅನುದಾನರಹಿತ ಶಾಲೆಗಳಾಗಿದ್ದು ಶೇ.36ರಷ್ಟು ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕರಡು ನಿಯಮದ ಪ್ರಕಾರ, ಸಮವಸ್ತ್ರ ಶುಲ್ಕ ನಿಯಮವನ್ನು ಉಲ್ಲಂಘಿಸಿಸುವ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸದಂತೆ ಸಂಬಂಧಿಸಿದ ರಾಜ್ಯಗಳು ಕ್ರಮ ಕೈಗೊಳ್ಳಬಹುದಾಗಿದೆ. ಅಥವಾ ಹಿಂದಿನ ವರ್ಷ ಆ ಶಾಲೆ ಅಥವಾ ಶಾಲೆಯ ಆಡಳಿತ ಮಂಡಳಿ ಪಡೆದ ಆದಾಯದ ಮೇಲೆ ಶೇ.10ರಷ್ಟು ದಂಡ ವಿಧಿಸಬಹುದಾಗಿದೆ ಎಂದು ಆಯೋಗದ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News