ಬಿಎಸ್‌ಎಫ್ ಜವಾನನಿಂದ ಅತ್ಯಾಚಾರ: ನೊಂದ ಮಹಿಳೆ ಆತ್ಮಹತ್ಯೆಗೆ ಶರಣು
Update: 2018-07-14 20:38 IST
ಮುಝಫರ್‌ನಗರ,ಜು.14: ಮದುವೆಯಾಗುವುದಾಗಿ ಆಮಿಷವೊಡ್ಡಿ ಬಿಎಸ್‌ಎಫ್ ಜವಾನನೋರ್ವನಿಂದ ಅತ್ಯಾಚಾರಕ್ಕೆ ಗುರಿಯಾಗಿದ್ದ 26 ಹರೆಯದ ಸ್ಥಳೀಯ ಯುವತಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜುಲೈ 6ರಂದು ವಿಷ ಸೇವಿಸಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾವನ್ನಪ್ಪಿದ್ದಾಳೆ. ತನ್ನ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ್ದ ಬಿಎಸ್‌ಎಫ್ ಜವಾನ ಅದರ ವೀಡಿಯೊವನ್ನು ಅಂತರ್ಜಾಲದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯನ್ನೊಡ್ಡಿದ್ದ ಎಂದು ಮೃತ ಯುವತಿಯ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಆರೋಪಿಯು ಮದುವೆಯಾಗುವ ಆಮಿಷವೊಡ್ಡಿ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಮತ್ತು ಆಕೆಗೆ ಕಿರುಕುಳ ನೀಡುತ್ತಿದ್ದ ಎಂದೂ ದೂರಿನಲ್ಲಿ ತಿಳಿಸಲಾಗಿದೆ.