×
Ad

ಸಂಭಾಜಿ ಭಿಡೆಯನ್ನು ಸಂಕಷ್ಟಕ್ಕೆ ತಳ್ಳಿದ ‘ಗಂಡುಮಕ್ಕಳಿಗಾಗಿ ಮಾವು’ಹೇಳಿಕೆ

Update: 2018-07-14 20:45 IST

ನಾಸಿಕ್(ಮಹಾರಾಷ್ಟ್ರ),ಜು.14: ಗಂಡುಮಕ್ಕಳನ್ನು ಪಡೆಯಲು ತನ್ನ ತೋಟದ ಮಾವಿನ ಹಣ್ಣುಗಳನ್ನು ತಿನ್ನುವಂತೆ ಹೇಳಿಕೆ ನೀಡುವ ಮೂಲಕ ವಿವಾದಾತ್ಮಕ ಸಂಘಪರಿವಾರ ನಾಯಕ ಸಂಭಾಜಿ ಭಿಡೆ ಗರ್ಭಧಾರಣೆ ಪೂರ್ವ ಮತ್ತು ಪ್ರಸವ ಪೂರ್ವ ನಿರ್ಣಯ ತಂತ್ರಜ್ಞಾನಗಳ(ಲಿಂಗ ಆಯ್ಕೆ ನಿಷೇಧ) ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ನಾಸಿಕ್ ಮಹಾನಗರ ಪಾಲಿಕೆ(ಎನ್‌ಎಂಸಿ)ಯು ಅವರನ್ನು ನ್ಯಾಯಾಲಯಕ್ಕೆಳೆಯಲು ನಿರ್ಧರಿಸಿದೆ.

ಈ ಹೇಳಿಕೆಯ ಮೂಲಕ ಭಿಡೆ ಅವರು ಕಾಯ್ದೆ ಉಲ್ಲಂಘನೆಯ ತಪ್ಪೆಸಗಿದ್ದಾರೆ ಎಂದು ಎನ್‌ಎಂಸಿಯ ಸಲಹಾ ಸಮಿತಿಯು ದೃಢಪಡಿಸಿದೆ ಎಂದು ಪೌರಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಜೆ.ಝಡ್.ಕೊಠಾರಿ ತಿಳಿಸಿದರು.

ಕಳೆದ ತಿಂಗಳು ನಾಸಿಕ್‌ನಲ್ಲಿ ಸಮಾವೇಶವೊಂದರಲ್ಲಿ ಮಾತನಾಡಿದ್ದ ಭಿಡೆ,ತನ್ನ ತೋಟದಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ತಿಂದ ಹಲವಾರು ದಂಪತಿಗಳು ಗಂಡು ಮಕ್ಕಳನ್ನು ಪಡೆದಿದ್ದಾರೆ ಎಂದು ಹೇಳಿದ್ದರು.

ಮಾಜಿ ಆರೆಸೆಸ್ ಕಾರ್ಯಕರ್ತ ಭಿಡೆಯವರ ಈ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಅಹ್ಮದ್‌ನಗರ ಮಹಾನಗರ ಪಾಲಿಕೆಯ ಸದಸ್ಯರೋರ್ವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ವಿಷಯವನ್ನು ಪರಿಶೀಲಿಸುವಂತೆ ಪುಣೆಯ ಹೆಚ್ಚುವರಿ ಆರೋಗ್ಯ ನಿರ್ದೇಶಕರು ಎನ್‌ಎಂಸಿಗೆ ಸೂಚಿಸಿದ್ದರು.

ಎನ್‌ಎಂಸಿಯ ಸಲಹಾ ಸಮಿತಿಯು ವಿವರಣೆಯನ್ನು ಕೇಳಿ ಭಿಡೆಯವರಿಗೆ ನೋಟಿಸ್ ಜಾರಿಗೊಳಿಸಿತ್ತಾದರೂ ಅವರು ಸಮಿತಿಯ ಮುಂದೆ ಹಾಜರಾಗಿರಲಿಲ್ಲ.

 ಶಿವ ಪ್ರತಿಷ್ಠಾನ ಹಿಂದುಸ್ಥಾನ ಸಂಘಟನೆಯ ಮುಖ್ಯಸ್ಥರಾಗಿರುವ ಭಿಡೆ ಜ.1ರಂದು ಪುಣೆ ಬಳಿ ನಡೆದಿದ್ದ ಭೀಮಾ-ಕೋರೆಗಾಂವ ಜಾತಿ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News