ತಿರುಪತಿ ತಿಮ್ಮಪ್ಪನಿಗೆ ಇಬ್ಬರು ಎನ್ನಾರೈ ಭಕ್ತರಿಂದ 13.5 ಕೋಟಿ ರೂ.ಕಾಣಿಕೆ
ತಿರುಪತಿ,ಜು.14: ಆಂಧ್ರಪ್ರದೇಶ ಪ್ರದೇಶ ಮೂಲದವರಾಗಿದ್ದು,ಅಮೆರಿಕದಲ್ಲಿ ಉದ್ಯಮಿಗಳಾಗಿರುವ ಇಬ್ಬರು ಎನ್ನಾರೈ ಭಕ್ತರು ತಮ್ಮ ಹರಕೆಯನ್ನು ತೀರಿಸಲು ತಿರುಪತಿ ತಿಮ್ಮಪ್ಪನಿಗೆ 13.5 ಕೋ.ರೂ.ಗಳ ಕಾಣಿಕೆಯನ್ನು ಅರ್ಪಿಸಿದ್ದಾರೆ.
ಐಕಾ ರವಿ ಅವರು ತನ್ನ ಅಮೆರಿಕದ ಬ್ಯಾಂಕ್ ಖಾತೆಯಿಂದ ಶ್ರೀವೆಂಕಟೇಶ್ವರ ದೇವಸ್ಥಾನದ ಇ-ಹುಂಡಿಗೆ ಆನ್‌ಲೈನ್ ಮೂಲಕ 10 ಕೋ.ರೂ.ಗಳ ಕಾಣಿಕೆಯನ್ನು ರವಾನಿಸಿದ್ದರೆ,ಶ್ರೀನಿವಾಸ ಗುತ್ತಿಕೊಂಡ ಅವರು ವೈಯಕ್ತಿಕವಾಗಿ 3.5 ಕೋ.ರೂ.ಗಳ ಕಾಣಿಕೆಯನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಲ್ಲಿಸಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ನ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ರವಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಶನಿವಾರ ಬೆಳಿಗ್ಗೆ ಟಿಟಿಡಿ ಅಧ್ಯಕ್ಷ ಪುತ್ತ ಸುಧಾಕರ ಯಾದವ ಮತ್ತು ಆಂಧ್ರಪ್ರದೇಶ ಕೈಗಾರಿಕಾ ಸಚಿವ ಎನ್.ಅಮರನಾಥ ರೆಡ್ಡಿಯವರ ಉಪಸ್ಥಿತಿಯಲ್ಲಿ ಈ ಕಾಣಿಕೆಗಳನ್ನು ದೇವರಿಗೆ ಅರ್ಪಿಸಲಾಗಿದೆ ಎಂದರು. ಯಾತ್ರಿಕರಿಗೆ ಉಚಿತ ಊಟ,ಆಸ್ಪತ್ರೆ ಮತ್ತು ಮಕ್ಕಳ ಅನಾಥಾಶ್ರಮ ಸೇರಿದಂತೆ ಟಿಟಿಡಿ ನಡೆಸುತ್ತಿರುವ ಸುಮಾರು ಅರ್ಧ ಡಝನ್ ಜನೋಪಕಾರಿ ಟ್ರಸ್ಟ್‌ಗಳ ಕಾರ್ಯಗಳಿಗೆ ತನ್ನ ದೇಣಿಗೆಯನ್ನು ಬಳಸಿಕೊಳ್ಳುವಂತೆ ಗುತ್ತಿಕೊಂಡ ಕೋರಿಕೊಂಡಿದ್ದಾರೆ ಎಂದು ರವಿ ತಿಳಿಸಿದರು.