ವಿದೇಶದಲ್ಲಿ ತಿರುಗಾಡಲು ಲಂಕನ್ನರಿಗೆ ನಕಲಿ ಭಾರತೀಯ ಪಾಸ್‌ಪೋರ್ಟ್ ನೀಡುತ್ತಿದ್ದ ಜಾಲ ಪೊಲೀಸ್ ಬಲೆಗೆ
ಚೆನ್ನೈ, ಜು.14: ವ್ಯವಸ್ಥೆಯಲ್ಲಿರುವ ದೋಷಗಳು ಮತ್ತು ಸರಕಾರಿ ಅಧಿಕಾರಿಗಳ ಸಹಾಯದಿಂದ ಜನರಿಗೆ ನೈಜ ಪಾಸ್‌ಪೋರ್ಟ್ ಮಾಡಿಕೊಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಬಯಲುಗೊಳಿಸಿದ್ದಾರೆ. ಈ ನಕಲಿ ಪಾಸ್‌ಪೋರ್ಟ್ ಜಾಲವು ಕಳೆದ ಮೂರು ದಶಕಗಳಿಂದ ಕಾರ್ಯಾಚರಿಸುತ್ತಿದೆ ಎಂದು ತಿಳಿಸಿರುವ ಅಧಿಕಾರಿಗಳು ಸದ್ಯ 10 ಜನರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದ್ದರು. ಶುಕ್ರವಾರದಂದು ಮತ್ತೆ ನಾಲ್ವರನ್ನು ಬಂಧಿಸಲಾಗಿದೆ. ವಿದೇಶ ಸುತ್ತಾಡಲು ಬಯಸುವ ಶ್ರೀಲಂಕ ತಮಿಳರನ್ನೇ ಹೆಚ್ಚಾಗಿ ಗುರಿ ಮಾಡಿದ್ದ ಈ ಜಾಲದಲ್ಲಿ ಪ್ರವಾಸ ಸಂಸ್ಥೆಯ ಏಜೆಂಟ್‌ಗಳು, ಗುಪ್ತಚರ ವಿಭಾಗ ಹಾಗೂ ಅಂಚೆ ಇಲಾಖೆಯ ಸಿಬ್ಬಂದಿ ಶಾಮೀಲಾಗಿದ್ದಾರೆ. ಈ ಜಾಲವು ಮೂರರಿಂದ ಐದು ಲಕ್ಷ ರೂ.ಗೆ ವಿದೇಶಿ ನಾಗರಿಕರಿಗೆ ನೈಜ ಭಾರತೀಯ ಪಾಸ್‌ಪೋರ್ಟ್‌ಗಳನ್ನು ಸಿದ್ಧಪಡಿಸಿ ನೀಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 10ರಂದು ಗುಪ್ತಚರ ವಿಭಾಗದ 49ರ ಹರೆಯದ ಪೇದೆ ಕೆ.ಮುರುಗನ್ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಟ್ ಮ್ಯಾನ್ ಧನಸೇಕರನ್ ಎಂಬರವನ್ನೂ ಅಧಿಕಾರಿಗಳು ಬಂಧಿಸಿದ್ದರು. ಇವರಿಬ್ಬರ ವಿಚಾರಣೆಯ ವೇಳೆ, ಇವರು ಕೆಲವು ಪ್ರವಾಸ ಸಂಸ್ಥೆ ಏಜೆಂಟ್‌ಗಳ ಜೊತೆ ಸೇರಿ ಈವರೆಗೆ ಯಾವುದೇ ಅಧಿಕೃತ ವಿಳಾಸವಿಲ್ಲದ ಮತ್ತು ಗುರುತಿನ ಚೀಟಿಯಿಲ್ಲದ ಹದಿನೈದು ಮಂದಿಗೆ ನೈಜ ಪಾಸ್‌ಪೋರ್ಟ್ ಮಾಡಿಕೊಟ್ಟಿರುವುದು ತಿಳಿದುಬಂದಿತ್ತು. ಅದಕ್ಕಾಗಿ ಇವರಿಬ್ಬರು ಪ್ರತಿಯೊಬ್ಬ ವ್ಯಕ್ತಿಯಿಂದ ತಲಾ ಒಂದು ಸಾವಿರ ರೂ. ಪಡೆದುಕೊಂಡಿದ್ದರು. ಬಂಧಿತರಿಂದ ಪಡೆದಂಥ ಮಾಹಿತಿಯ ಆಧಾರದಲ್ಲಿ ತನಿಖಾಧಿಕಾರಿಗಳು ಚೆನ್ನೈಲ್ಲಿ ಕಾರ್ಯಾಚರಿಸುತ್ತಿರುವ ಜಾಲವನ್ನು ಬಯಲಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ರಮ ದಾರಿಗಳ ಮೂಲಕ ಆಸ್ಟ್ರೇಲಿಯ ಹಾಗೂ ಇತರ ದೇಶಗಳಿಗೆ ತೆರಳಲು ಸಾಧ್ಯವಾಗದ ಶ್ರೀಲಂಕದ ತಮಿಳರಿಗೆ ಈ ಜಾಲವು ಭಾರತದ ಪಾಸ್‌ಪೋರ್ಟ್ ಮಾಡಿಕೊಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಆರ್‌ಪಿಎಫ್ ಪೇದೆ ಆರ್. ಕ್ರಿಸ್ಟೊಫರ್ ಮತ್ತು ಎಸ್. ಮಣಿವಣ್ಣನ್ ಎಂಬವರನ್ನು ಮೇ 8ರಂದು ಬಂಧಿಸಿತ್ತು. ಕ್ರಿಸ್ಟೊಫರ್ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಿಯೋಜಿತರಾಗಿದ್ದರೆ ಮಣಿವಣ್ಣನ್ ವಿಮಾನ ನಿಲ್ದಾಣದ ಆಡಳಿಯ ಕಚೇರಿಯಲ್ಲಿ ಗುಮಾಸ್ತರಾಗಿದ್ದರು.