ಸಂತೋಷ ಸಮೀಕ್ಷೆ: ಜನರಿಗೆ 30 ಪ್ರಶ್ನೆ ಕೇಳಲಿರುವ ಸರಕಾರ
ಭೋಪಾಲ್, ಜು.14: ರಾಜ್ಯದಲ್ಲಿ ನಡೆಯಲಿರುವ ಮೊದಲ ಸಂತೋಷ ಸಮೀಕ್ಷೆಯ ವೇಳೆ ಕೇಳಲಾಗುವ ಮೂವತ್ತು ಪ್ರಶ್ನೆಗಳನ್ನು ಮಧ್ಯ ಪ್ರದೇಶ ಸರಕಾರ ಮತ್ತು ಐಐಟಿ ಕರಗ್ಪುರದ ತಜ್ಞರು ಅಂತಿಮಗೊಳಿಸಿದ್ದಾರೆ. ಈ ಸಮೀಕ್ಷೆಯನ್ನು ರಾಜ್ಯದ ಸಂತೋಷ ಇಲಾಖೆ ನಡೆಸುತ್ತಿದೆ (ಈ ರೀತಿಯ ಇಲಾಖೆ ದೇಶದಲ್ಲೇ ಮೊದಲನೆಯದ್ದಾಗಿದೆ). ಈ ಸಮೀಕ್ಷೆಯಲ್ಲಿ ಜನರು ಶಿಕ್ಷಣ, ಸಮಾಜಿಕ, ಆರ್ಥಿಕ ಮಾನದಂಡಗಳು ಮತ್ತು ಸರಕಾರಿ ಕಚೇರಿಗಳಲ್ಲಿ ಅವರ ಅನುಭವ ಮತ್ತು ಯೋಜನೆಗಳ ಬಗ್ಗೆ ಅವರ ಅನಿಸಿಕೆಗಳ ಕುರಿತು ಒಂದರಿಂದ ಹತ್ತರ ಒಳಗೆ ಅಂಕಗಳನ್ನು ನೀಡಬೇಕಾಗುತ್ತದೆ. ಗುರುವಾರ ಮತ್ತು ಶುಕ್ರವಾರ ನಡೆದ ಸಭೆಯಲ್ಲಿ ಪ್ರಶ್ನೆಗಳನ್ನು ಅಂತಿಮಗೊಳಿಸಲಾಗಿದೆ. ಈ ಸಭೆಯಲ್ಲಿ ಮಧ್ಯಪ್ರದೇಶ ಸರಕಾರದ ಅಧಿಕಾರಿಗಳು, ಐಐಟಿ ಕರಗ್ಪುರದ ತಜ್ಞರು ಹಾಗೂ ಇತರರು ಉಪಸ್ಥಿತರಿದ್ದರು. ಈ ಪ್ರಶ್ನೆಗಳನ್ನು ಜಗತ್ತಿನ ವಿವಿಧ ಭಾಗಗಳಲ್ಲಿ ಇರುವ ತಜ್ಞರಿಗೆ ಕಳುಹಿಸಲಾಗುವುದು. ಈ ಸಮೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳು ಮತ್ತು ದರ್ಜೆ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಸಮವಾಗಿದೆ ಎಂಬುದು ಖಾತ್ರಿಯಾದ ನಂತರ ಸರಕಾರ ಸಮೀಕ್ಷೆಯನ್ನು ಆರಂಭಿಸಲಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸರಕಾರವು 2000 ಜನರನ್ನೊಳಗೊಂಡ ಸಣ್ಣ ಮಟ್ಟದ ಸಂತೋಷ ಸಮೀಕ್ಷೆಯನ್ನು ನಡೆಸಿತ್ತು. ಈ ಸಮೀಕ್ಷೆಯಲ್ಲಿ ಪಡೆದ ಉತ್ತರಗಳ ಆಧಾರದಲ್ಲಿ ಸದ್ಯದ ಸಮೀಕ್ಷೆಯ ಪ್ರಶ್ನೆಗಳನ್ನು ತಯಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಮೀಕ್ಷೆ ಆರಂಭವಾದ ನಂತರ ಒಂದು ತಿಂಗಳೊಳಗೆ ಸಂಪೂರ್ಣಗೊಳ್ಳಲಿದೆ. ಮಧ್ಯ ಪ್ರದೇಶದ ಜನರು ಎಷ್ಟು ಸಂತೋಷವಾಗಿದ್ದಾರೆ ಎಂಬುದನ್ನು ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ತಿಳಿಯಲು ಸರಕಾರ ಬಯಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಮಧ್ಯ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.