ಆಂಧ್ರಪ್ರದೇಶ: ಬೋಟು ಮುಳುಗಿ ಇಬ್ಬರ ಸಾವು, ಹಲವು ಮಂದಿ ನಾಪತ್ತೆ
Update: 2018-07-14 21:24 IST
ಹೈದರಾಬಾದ್, ಜು.14: ಪೂರ್ವ ಗೋದಾವರಿ ಜಿಲ್ಲೆಯ ಗೌತಮಿ ನದಿಯಲ್ಲಿ ಸುಮಾರು 40 ಜನರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿದ್ದು ಇಬ್ಬರು ಮೃತಪಟ್ಟಿದ್ದು, ಹಲವು ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ನದಿಯಲ್ಲಿದ್ದ ಸೇತುವೆಯ ಕಂಬಕ್ಕೆ ಢಿಕ್ಕಿಯಾಗಿ ದೋಣಿ ಮುಳುಗಿದ್ದು ಶಾಲೆಯಿಂದ ಮನೆಗೆ ಮರಳುತ್ತಿದ್ದ ಮಕ್ಕಳೂ ಸೇರಿ 40 ಮಂದಿ ಈ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಇಬ್ಬರು ಮೃತಪಟ್ಟಿದ್ದು ಸುಮಾರು 30 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಇತರರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿಪತ್ತು ನಿರ್ವಹಣಾ ಪಡೆಯ ರಾಷ್ಟ್ರೀಯ ಹಾಗೂ ರಾಜ್ಯ ಘಟಕದ ತಂಡಗಳು ಸ್ಥಳೀಯರ ನೆರವಿನಿಂದ ಕಾರ್ಯಾಚರಣೆ ನಡೆಸುತ್ತಿವೆ. ರಕ್ಷಣಾ ಕಾರ್ಯ ತೀವ್ರಗೊಳಿಸುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸ್ಥಳೀಯ ಆಡಳಿತಕ್ಕೆ ತಿಳಿಸಿದ್ದಾರೆ.