ವಿಶ್ವಕಪ್: ಬೆಲ್ಜಿಯಂಗೆ ಮೂರನೇ ಸ್ಥಾನ
Update: 2018-07-14 21:29 IST
ಸೈಂಟ್ ಪೀಟರ್ಸ್‌ಬರ್ಗ್, ಜು.14: ಫಿಫಾ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಬೆಲ್ಜಿಯಂ ತಂಡ ಇಂಗ್ಲೆಂಡ್ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದು ತನ್ನ ಅಭಿಯಾನ ಕೊನೆಗೊಳಿಸಿತು. ಇದು ವಿಶ್ವಕಪ್‌ನಲ್ಲಿ ಬೆಲ್ಜಿಯಂನ ಉತ್ತಮ ಸಾಧನೆಯಾಗಿದೆ.
ಶನಿವಾರ ಇಲ್ಲಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಬೆಲ್ಜಿಯಂ 4ನೇ ನಿಮಿಷದಲ್ಲಿ 1-0 ಮುನ್ನಡೆ ಸಾಧಿಸಿ ಇಂಗ್ಲೆಂಡ್‌ಗೆ ಒತ್ತಡ ಹೇರಿತು. ಥಾಮಸ್ ಮೇನಿಯರ್ ಬೆಲ್ಜಿಯಂಗೆ ಆರಂಭಿಕ ಮೇಲುಗೈ ಒದಗಿಸಿಕೊಟ್ಟರು.
82ನೇ ನಿಮಿಷದಲ್ಲಿ ಗೋಲು ಗಳಿಸಿದ ನಾಯಕ ಏಡೆನ್ ಹಝಾರ್ಡ್ ಬೆಲ್ಜಿಯಂ 2-0 ಅಂತರದಿಂದ ಜಯ ಸಾಧಿಸಲು ನೆರವಾದರು. ಹಝಾರ್ಡ್ ಬೆಲ್ಜಿಯಂ ಪರ ಆಡಿರುವ ಕಳೆದ 25 ಪಂದ್ಯಗಳಲ್ಲಿ 25 ಗೋಲುಗಳನ್ನು(12 ಗೋಲು, 13 ನೆರವು)ಗಳಿಸಲು ನೆರವಾಗಿದ್ದಾರೆ.