ಯುಪಿಎಸ್‌ಸಿ ಪ್ರಿಲಿಮ್ಸ್ ಫಲಿತಾಂಶ ಪ್ರಕಟ
Update: 2018-07-14 21:55 IST
ಹೊಸದಿಲ್ಲಿ, ಜು.14: ಯುಪಿಎಸ್‌ಸಿ ಸಿವಿಲ್ ಸರ್ವಿಸ್ ಪ್ರಿಲಿಮಿನರಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ತೇರ್ಗಡೆಯಾಗಿರುವ ವಿದ್ಯಾರ್ಥಿಗಳು 2018ರ ಅಕ್ಟೋಬರ್ 1ರಂದು ನಡೆಯಲಿರುವ ಮೈನ್ ಪರೀಕ್ಷೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ಅಲ್ಲದೆ ಇಂಡಿಯನ್ ಫಾರೆಸ್ಟ್ ಸರ್ವಿಸ್ (ಮೈನ್) ಪರೀಕ್ಷೆಗೆ ಅರ್ಹತೆ ಗಳಿಸಿರುವ ಅಭ್ಯರ್ಥಿಗಳ ಕ್ರಮಸಂಖ್ಯೆ(ರೋಲ್‌ನಂಬರ್) ಕೂಡಾ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಫಲಿತಾಂಶವನ್ನು ಸಂಸ್ಥೆಯ ವೆಬ್‌ಸೈಟ್‌ನಿಂದ ಪಡೆಯಬಹುದಾಗಿದೆ. ಪ್ರತೀ ವರ್ಷ ಮೂರು ಹಂತಗಳಲ್ಲಿ ಯುಪಿಎಸ್‌ಸಿ ಪರೀಕ್ಷೆ ನಡೆಯುತ್ತದೆ. ಈ ಬಾರಿ 3 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್), ಭಾರತೀಯ ವಿದೇಶ ಸೇವೆ(ಐಎಫ್‌ಸಿ) ಹಾಗೂ ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಮುಂತಾದ ವಿಭಾಗಗಳಿಗೆ ಈ ಪರೀಕ್ಷೆ ಮೂಲಕ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ.