×
Ad

ಗಲಭೆ ಪ್ರಚೋದಿಸುವ ಯೋಜನೆ ಕುರಿತ ಗುಪ್ತ ಮಾಹಿತಿಯನ್ನು ರಕ್ಷಣಾ ಸಚಿವರು ಗೃಹ ಸಚಿವರೊಂದಿಗೆ ಹಂಚಿಕೊಳ್ಳಲಿ

Update: 2018-07-14 22:02 IST

ಹೊಸದಿಲ್ಲಿ, ಜು.14: ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಯೋಜನೆ ಕುರಿತ ಗುಪ್ತ ಮಾಹಿತಿಯನ್ನು ರಕ್ಷಣಾ ಸಚಿವೆ ಸೀತಾರಾಮನ್ ಗೃಹ ಸಚಿವರೊಂದಿಗೆ ಹಂಚಿಕೊಳ್ಳಲಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ. ಪಕ್ಷಗಳ ಮತ್ತು ವ್ಯಕ್ತಿಗಳ ಧಾರ್ಮಿಕ ಸಂಪರ್ಕದ ಬಗ್ಗೆ ತನಿಖೆ ನಡೆಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಸಾಕಷ್ಟು ಸಮಯಾವಕಾಶವಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ದೇಶದಲ್ಲಿ ಕೋಮು ಸೌಹಾರ್ದಕ್ಕೆ ಭಂಗ ಉಂಟುಮಾಡುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಆರೋಪಕ್ಕೆ ಚಿದಂಬರಂ ಪ್ರತಿಕ್ರಿಯೆ ನೀಡುತ್ತಿದ್ದರು. ಪಾಕಿಸ್ತಾನದ ಸದ್ದಡಗಿಸಿದ ಮೇಲೆ, ಭಯೋತ್ಪಾದನೆಯನ್ನು ನಾಶಗೊಳಿಸಿದ ಬಳಿಕ, ಒಳನುಸುಳುವಿಕೆಯನ್ನು ತಡೆಗಟ್ಟಿದ ನಂತರ ಹಾಗೂ ರಫೇಲ್ ಯುದ್ಧವಿಮಾನವನ್ನು ಪಡೆದುಕೊಂಡ ಬಳಿಕ ರಕ್ಷಣಾ ಸಚಿವರಿಗೆ ಪಕ್ಷಗಳು ಹಾಗೂ ವ್ಯಕ್ತಿಗಳ ಧಾರ್ಮಿಕ ಸಂಪರ್ಕದ ಬಗ್ಗೆ ತನಿಖೆ ನಡೆಸಲು ಸಾಕಷ್ಟು ಸಮಯಾವಕಾಶವಿದೆ ಎಂದವರು ವ್ಯಂಗ್ಯವಾಡಿದ್ದಾರೆ. 2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಧರ್ಮದ ವಿಷಯವನ್ನು ಮುಂದಿಟ್ಟು ಆಟವಾಡುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಚಿವೆ ಆರೋಪಿಸಿದ್ದರು. ಕಾಂಗ್ರೆಸ್ ಪಕ್ಷ ಕೋಮು ವಿಭಜನೆಯ ಅಪಾಯಕಾರಿ ಆಟ ಆಡುತ್ತಿದೆ. ಧರ್ಮದ ವಿಷಯವನ್ನು ಮುಂದಿಟ್ಟುಕೊಂಡಿದೆ. ಇದು 1947ರಲ್ಲಿ ದೇಶ ವಿಭಜನೆಯಾದ ಸಂದರ್ಭದಲ್ಲಿ ದೇಶದಲ್ಲಿದ್ದ ಕೋಮು ಜಗಳದ ಪರಿಸ್ಥಿತಿಗೆ ಕಾರಣವಾಗುವ ಅಪಾಯವಿದೆ. ಈಗಿನ ಸಮಯ ಮತ್ತು 2019ರ ಲೋಕಸಭಾ ಚುನಾವಣೆಯ ಮಧ್ಯದ ಅವಧಿಯಲ್ಲಿ ಸೌಹಾರ್ದ ಕೆಡಿಸುವ ಯಾವುದೇ ಘಟನೆ ಸಂಭವಿಸಿದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ಸಂಪೂರ್ಣ ಹೊಣೆಯಾಗಿದೆ ಎಂದು ನಿರ್ಮಲಾ ಹೇಳಿದ್ದರು.

ಕಾಂಗ್ರೆಸ್ ಮತ್ತೆ ಭಾರತ ವಿಭಜಿಸುವ ಮನಸ್ಥಿತಿಗೆ ಮರಳಿದಂತೆ ಕಾಣಿಸುತ್ತದೆ. 2019ರ ಚುನಾವಣೆಯನ್ನು ಅವರು ಧರ್ಮದ ಆಧಾರದಲ್ಲಿ ಎದುರಿಸುವುದು ಸ್ಪಷ್ಟವಾಗಿದೆ. ಇದಕ್ಕೆ ಈಗಲೇ ಅಡಿಗಲ್ಲು ಹಾಕಲಾಗಿದೆ ಎಂದ ಅವರು, ಬುಧವಾರ ಮುಸ್ಲಿಂ ಬುದ್ಧಿಜೀವಿಗಳೊಂದಿಗೆ ನಡೆಸಿದ್ದ ಸಂವಾದದಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷ ಮುಸ್ಲಿಮರ ಪಕ್ಷ ಎಂದು ಹೇಳಿರುವುದನ್ನು ಉಲ್ಲೇಖಿಸಿದರು. ಇತ್ತೀಚೆಗೆ ರಾಹುಲ್, ಮಹಾತ್ಮಾ ಗಾಂಧೀಜಿ ಜನಿವಾರ ಧಾರಿ ಎಂದು ಹೇಳಿಕೆ ನೀಡಿದ್ದರು. ಒಂದು ಕಡೆ ನೀವು ಜನಿವಾರಧಾರಿಗಳಾಗುತ್ತೀರಿ, ಇನ್ನೊಂದೆಡೆ ಮುಸ್ಲಿಮ್‌ ಧಾರಿಗಳಾಗುತ್ತೀರಿ. ಜನತೆಯ ನಂಬಿಕೆಯ ಜೊತೆ ನೀವು ಆಟವಾಡುತ್ತಿದ್ದೀರಿ ಎಂದು ರಾಹುಲ್ ಗಾಂಧಿಯವರನ್ನು ಟೀಕಿಸಿದರು. ಆದರೆ ರಾಹುಲ್ ಈ ರೀತಿಯ ಹೇಳಿಕೆ ನೀಡಿರಲಿಲ್ಲ ಎಂದು ಬುಧವಾರ ಮುಸ್ಲಿಮ್ ಬುದ್ಧಿಜೀವಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇತಿಹಾಸತಜ್ಞ ಸಯ್ಯದ್ ಇರ್ಫಾನ್ ಹಬೀಬ್ ಹೇಳಿದ್ದಾರೆ. ಈ ವಿಷಯವೇ ಅಲ್ಲಿ ಚರ್ಚೆಗೆ ಬರಲಿಲ್ಲ. ಇದೊಂದು ಕಪೋಲ ಕಲ್ಪಿತ ಹೇಳಿಕೆಯಾಗಿದೆ ಎಂದವರು ತಿಳಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಸಮಾಜದಲ್ಲಿ ಆತಂಕದ ಸ್ಥಿತಿ ಮೂಡಿಸುವ ಮೂಲಕ ವಾಸ್ತವಿಕ ಸಮಸ್ಯೆಗಳಿಂದ ಜನತೆಯ ಚಿತ್ತವನ್ನು ಬೇರೆಡೆಗೆ ಸೆಳೆಯಲು ಸಚಿವೆ ಪ್ರಯತ್ನಿಸುತ್ತಿದ್ದಾರೆ ಎಂದಿದೆ. ನಿರ್ಮಲಾ ಸೀತಾರಾಮನ್ ನೀಡಿರುವ ಹೇಳಿಕೆ ದೇಶವನ್ನು ಧ್ರುವೀಕರಣಗೊಳಿಸುವ ಪ್ರಧಾನಿ ಮೋದಿಯವರ ಅಜೆಂಡಾದ ಮುಂದುವರಿದ ಭಾಗವಾಗಿದೆ. ಶೀಘ್ರವೇ ಆರಂಭವಾಗಲಿರುವ ಮಾನ್ಸೂನ್ ಅಧಿವೇಶನದಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲು ಸರಕಾರ ಹಿಂಜರಿಯುತ್ತಿರುವುದರಿಂದ ವಿವಾದ ಹುಟ್ಟುಹಾಕಿ ವಾಸ್ತವಾಂಶವನ್ನು ಮರೆಮಾಚಲು ಸಚಿವರು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಷ್ಮಿತಾ ದೇವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News