ದಿಲ್ಲಿ ದರ್ಬಾರ್

Update: 2018-07-14 18:31 GMT

ಕಮಲ್‌ನಾಥ್ ಅವರ ಕನಸುಗಳ ತೇರು

ಭಾರತೀಯ ಜನತಾ ಪಕ್ಷದ ನಾಯಕರು ಮಧ್ಯಪ್ರದೇಶದಲ್ಲಿ ಈಗಾಗಲೇ ಚುನಾವಣೆಯ ಯಂತ್ರಕ್ಕೆ ಚಾಲನೆ ನೀಡಿದ್ದಾರೆ. ಆದರೆ ಕಾಂಗ್ರೆಸ್‌ನ ಯಂತ್ರ ಮಾತ್ರ ಇನ್ನೂ ಅಕ್ಷರಶಃ ನಿಂತಲ್ಲೇ ನಿಂತಿದೆ. ರಾಜ್ಯಾದ್ಯಂತ ಏಕತಾ ಯಾತ್ರೆಯನ್ನು ಹಮ್ಮಿಕೊಂಡಿದ್ದ ಕಾಂಗ್ರೆಸ್ ಅದಕ್ಕಾಗಿ ಹವಾನಿಯಂತ್ರಿತ ಬಸ್ಸನ್ನು ಬಳಸಿಕೊಂಡಿತ್ತು. ಆದರೆ ಈ ಬಸ್ ಸದ್ಯ ಮಧ್ಯ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ಕಮಲ್‌ನಾಥ್ ಅವರ ನಿವಾಸದ ಮುಂದೆ ನಿಂತಿದೆ. ಈಗ ಎಲ್ಲರ ಕಣ್ಣು ದಿಲ್ಲಿ ಮೇಲಿದೆ. ರಾಹುಲ್ ಗಾಂಧಿ ಮಧ್ಯ ಪ್ರದೇಶದಲ್ಲಿ ಏಕತಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ ಯಾತ್ರೆಯಲ್ಲಿ ಕಮಲ್‌ನಾಥ್ ಜೊತೆಗೆ ದಿಗ್ವಿಜಯ್ ಸಿಂಗ್, ಸುರೇಶ್ ಪಚೌರಿ, ಜ್ಯೋತಿರಾಧಿತ್ಯ ಸಿಂಧಿಯ, ಅಜಯ್ ಮಾಕೆನ್ ಸೇರಿದಂತೆ ಕಾಂಗ್ರೆಸ್‌ನ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ, 2018 ನವೆಂಬರ್‌ಗೂ ಮುನ್ನ ಕಾಂಗ್ರೆಸ್ ಈ ಬಸ್‌ನಲ್ಲಿ ಬಹುತೇಕ ರಾಜ್ಯವನ್ನು ಸುತ್ತುವ ಇರಾದೆಯನ್ನು ಹೊಂದಿದೆ. ಈ ಯಾತ್ರೆಗೆ ಚಾಲನೆ ನೀಡಬೇಕಿದ್ದ ರಾಹುಲ್ ಗಾಂಧಿ ಆ ಬಗ್ಗೆ ಯಾವುದೇ ಅವಸರ ಪ್ರದರ್ಶಿಸುತ್ತಿಲ್ಲ ಮತ್ತು ಇತ್ತಕಡೆ ಕಮಲ್ ನಾಥ್ ಅವರ ಕಾತರತೆ ಹೆಚ್ಚುತ್ತಿದೆ. ಹಲವು ವರ್ಷಗಳ ಬಳಿಕ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವ ಉತ್ತಮ ಅವಕಾಶವಿದೆ ಎನ್ನುವುದು ಓರ್ವ ಶ್ರಮಜೀವಿಯಾಗಿರುವ ಕಮಲ್‌ನಾಥ್‌ಗೆ ತಿಳಿದಿದೆ. ಜೊತೆಗೆ ತಾನು ಮುಖ್ಯಮಂತ್ರಿಯಾಗಲೂಬಹುದು ಎಂಬ ಯೋಚನೆ ಅವರನ್ನು ತಾಳ್ಮೆ ಕಳೆದುಕೊಳ್ಳುವಂತೆ ಮಾಡಿದೆ.


ರಾಜನಾಥ್, ಸುಶ್ಮಾ ಜುಗಲ್‌ಬಂದಿ

2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ ರಾಜಕೀಯ ವಲಯದಲ್ಲಿ ಈಗಲೇ ಗಾಳಿ ಜೋರಾಗಿ ಬೀಸಲಾರಂಭಿಸಿದೆ. ಕಾಂಗ್ರೆಸ್ ವಕ್ತಾರರ ಮಗಳಿಗೆ ಹಲ್ಲೆ ನಡೆಸುವುದಾಗಿ ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬ ಒಡ್ಡಿದ ಬೆದರಿಕೆಗೆ ಗೃಹ ಸಚಿವ ರಾಜನಾಥ್ ಸಿಂಗ್ ನೀಡಿದ ಪ್ರತಿಕ್ರಿಯೆ ಕೇಳುವಂತಹದ್ದೇ. ಇನ್ನು ಲಕ್ನೊದಲ್ಲಿ ಅಂತರ್‌ಧರ್ಮೀಯ ವಿವಾಹವಾದ ಮಹಿಳೆ ಪಾಸ್‌ಪೋರ್ಟ್ ಪಡೆಯಲು ನೆರವಾಗುವ ಮೂಲಕ ಸುಶ್ಮಾ ಸ್ವರಾಜ್ ಜನರ ಹೊಗಳಿಕೆ ಪಡೆಯಲು ಯತ್ನಿಸಿದ ರೀತಿಯೂ ಕೂಡಾ. ದಿಲ್ಲಿಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತೆಂದರೆ, ಒಂದು ವೇಳೆ ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯದೆ ಹೋದರೆ, ಕೆಲವು ಪಕ್ಷಗಳು ಸಿಂಗ್ ಅಥವಾ ಸ್ವರಾಜ್ ಮೈತ್ರಿ ಸರಕಾರದ ನೇತೃತ್ವವನ್ನು ವಹಿಸಬೇಕು ಎಂದು ಆಗ್ರಹಿಸುವ ಸಾಧ್ಯತೆಯಿದೆ. ಆದರೆ ಇಂಥ ಊಹಾಪೋಹಗಳು 2014ರ ಚುನಾವಣೆಯ ಮುನ್ನವೂ ಇದ್ದವು. ಮೋದಿಗೆ ಈ ಪಿಸುಮಾತುಗಳ ಬಗ್ಗೆ ಸರಿಯಾಗಿ ತಿಳಿದಿರಬಹುದು ಮತ್ತು ಅವರು ಈಗಾಗಲೇ ಈ ಪ್ರಬಲ ನಾಯಕರನ್ನು ಹದ್ದುಬಸ್ತಿನಲ್ಲಿಡಲು ತಂತ್ರವನ್ನೂ ಹೂಡಿರಬಹುದು. ಒಂದಂತೂ ಸತ್ಯ, 2019ರಲ್ಲಿ ರಾಜಕೀಯವು ಬಹಳ ಆಸಕ್ತಿದಾಯಕವಾಗಿರಲಿದೆ.


ಶರದ್ ಸಲಹೆ

ನಿತೀಶ್ ಕುಮಾರ್ ಅವರನ್ನು ಬೃಹತ್ ಮೈತ್ರಿಗೆ ಸೇರಿಸದಂತೆ ತಡೆಯುವಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಪ್ರಮುಖರು. ಆದರೆ ಅವರ ಹೊರತಾಗಿ ಇನ್ನೋರ್ವ ಪ್ರಭಾವಿ ನಾಯಕ ನಿತೀಶ್ ಸೇರ್ಪಡೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ಅವರೇ ಶರದ್ ಯಾದವ್. ಈ ವಿಷಯದಲ್ಲಿ ಶರದ್ ಯಾದವ್ ಅವರ ಸಲಹೆಯನ್ನು ಲಾಲೂ ಪ್ರಸಾದ್ ಅವರು ಕೋರಿದ ಸಂದರ್ಭದಲ್ಲಿ ಶರದ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ತಪ್ಪನ್ನು ಮಾಡಬೇಡಿ. ನಿಮ್ಮ ಮತದಾರರಿಗೆ ನೀವು ಏನೆಂದು ಹೇಳುತ್ತೀರ? ಎಂದು ಶರದ್ ಪ್ರಶ್ನಿಸಿದ್ದರು ಎಂದು ಅವರ ಆಪ್ತರು ತಿಳಿಸುತ್ತಾರೆ. ಮೂಲಗಳ ಪ್ರಕಾರ, ಈ ಪ್ರಸ್ತಾವನೆ ನಿಜವಾಗಿ ಮುಂದಿಡಲು ಕಾರಣ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಪ್ರಸಾದ್‌ರನ್ನು ಭೇಟಿ ಮಾಡಿದ ಕಿಶೋರ್ ಅವರಿಗೆ ಈ ಸಲಹೆಯನ್ನು ನೀಡಿದ್ದರು. ಆದರೆ ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳದಂತೆ ಶರದ್ ಯಾದವ್ ಕೇವಲ ಲಾಲೂ ಪ್ರಸಾದ್‌ಗೆ ಮಾತ್ರವಲ್ಲ ಕಾಂಗ್ರೆಸ್‌ಗೂ ಎಚ್ಚರಿಕೆ ನೀಡಿದ್ದಾರೆ. ಶರದ್ ಯಾದವ್ ಕೋಪಕ್ಕೆ, ನಿತೀಶ್ ಬಿಜೆಪಿ ಜೊತೆ ಮತ್ತೆ ಕೈಜೋಡಿಸಿರುವುದು ಕಾರಣವೋ ಅಥವಾ ತನ್ನನ್ನು ರಾಜ್ಯಸಭೆಯಿಂದ ತೆಗೆಯುವಂತೆ ಜೆಡಿಯು ಮಾಡಿದ ಒತ್ತಾಯ ಕಾರಣವೋ ಸ್ಪಷ್ಟವಾಗಿಲ್ಲ. ಏನೇ ಆದರೂ ದೈತ್ಯ ಮೈತ್ರಿಯಲ್ಲಿ ನಿತೀಶ್‌ಗೆ ಬಹಳಷ್ಟು ಮಂದಿ ಶತ್ರುಗಳಿದ್ದಾರೆ. ಹಾಗಾಗಿ ಅವರು ಎನ್‌ಡಿಎ ಜೊತೆ ಸೇರಲು ಬಯಸಿರಲೂ ಬಹುದು.


ಅಖಿಲೇಶ್ ಯಾದವ್ ಕೊಡುಗೆ

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್ ಏನು ಸಾಧನೆ ಮಾಡಿದ್ದಾರೆ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ, ಅವರ ಬಳಿ ಅದಕ್ಕೆ ತಕ್ಕುದಾದ ಉತ್ತರವಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೆ-ಇನ್ ಉತ್ತರ ಪ್ರದೇಶದ ನೊಯ್ಡಿದಲ್ಲಿ ಸ್ಯಾಮ್‌ಸಂಗ್‌ನ ಮೊಬೈಲ್ ಫೋನ್ ಕಾರ್ಖಾನೆಯನ್ನು ಉದ್ಘಾಟಿಸಿದ್ದರು. ಜಗತ್ತಿನ ಅತ್ಯಂತ ದೊಡ್ಡ ಮೊಬೈಲ್ ತಯಾರಿಕಾ ಘಟಕ ಇದಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಯೋಜನೆಯನ್ನು ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ತನಗೆ ಸಲ್ಲಬೇಕು ಎಂದು ಅಖಿಲೇಶ್ ಯಾದವ್‌ಹೇಳಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, ಈ ಯೋಜನೆಗೆ ಬೇಕಾದ ಮೂವತ್ತು ಎಕರೆ ಜಮೀನನ್ನು ಕೂಡಾ ತಾನೇ ಒದಗಿಸಿದ್ದು ಮತ್ತು ಇದಕ್ಕೆ ಸಂಬಂಧಿಸಿದಂತೆ 2016ರ ಅಕ್ಟೋಬರ್‌ನಲ್ಲಿ ತನ್ನ ಉಪಸ್ಥಿತಿಯಲ್ಲಿ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಸ್ಯಾಮ್‌ಸಂಗ್ ಇಂಡಿಯದ ಸಿಇಒ ಒಪ್ಪಂದಕ್ಕೆ ಸಹಿ ಹಾಕಿದ್ದರು ಎಂದು ಯಾದವ್ ಹೇಳಿಕೊಂಡಿದ್ದಾರೆ. ಅವರು 2016ರಲ್ಲಿ ಸ್ಯಾಮ್‌ಸಂಗ್ ಸಂಸ್ಥೆಯ ಅಧಿಕಾರಿಗಳ ಜೊತೆಗೆ ತೆಗೆಯಲಾಗಿದ್ದ ಫೋಟೊಗಳನ್ನು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ಕಾರ್ಖಾನೆಯು ತನ್ನ ಸರಕಾರದ ಸಾಧನೆ ಎಂದು ಪ್ರಧಾನಿ ಮೋದಿ ಬಿಂಬಿಸಿಕೊಳ್ಳುವ ಹೊತ್ತಲ್ಲಿ ಮಾಧ್ಯಮಗಳು ತನ್ನ ಹೇಳಿಕೆಗೆ ಯವುದೇ ಮಹತ್ವವನ್ನು ನೀಡುವುದಿಲ್ಲ ಎನ್ನುವುದು ಅಖಿಲೇಶ್‌ಗೂ ತಿಳಿದಿತ್ತು. ಅದರಂತೆಯೇ ಕೊನೆಯಲ್ಲಿ ಬೆರಳೆಣಿಕೆಯ ಮಾಧ್ಯಮಗಳು ಮಾತ್ರ ಅಖಿಲೇಶ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದವು.


ಅಧೀರ್‌ರ ಫುಟ್ಬಾಲ್ ಪ್ರೇಮ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷ ತೃಣಮೂಲ ಕಾಂಗ್ರೆಸ್ ಜೊತೆ ಕೈಜೋಡಿಸುವುದೋ ಅಥವಾ ಕಮ್ಯುನಿಸ್ಟ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದೋ ಎಂಬ ವಿಚಾರದಲ್ಲಿ ಸಾಕಷ್ಟು ಗೊಂದಲ ಇರಬಹುದು. ಆದರೆ ಅದರ ಮಧ್ಯೆಯೂ ಕಾಂಗ್ರೆಸ್‌ನ ಬಂಗಾಳದ ಅಧ್ಯಕ್ಷ ಅಧೀರ್ ಅವರು ಫುಟ್ಬಾಲ್ ಬಗ್ಗೆ ಮಾತನಾಡುವುದನ್ನಾಗಲೀ, ಅವರಿಗೆ ಫುಟ್ಬಾಲ್ ಆಟದ ಮೇಲೆ ಇರುವ ಪ್ರೀತಿಯನ್ನು ವ್ಯಕ್ತಪಡಿಸುವುದನ್ನು ತಡೆಯುವುದಾಗಲೀ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ಈ ಸಲದ ಪ್ರತಿ ಫುಟ್ಬಾಲ್ ಫೈನಲ್ ಪಂದ್ಯವನ್ನೂ ಟಿವಿಯಲ್ಲಿ ತಪ್ಪದೇ ವೀಕ್ಷಿಸಿರುವ ಅಧೀರ್ ಸದ್ಯ ರವಿವಾರ ನಡೆಯಲಿರುವ ಫ್ರಾನ್ಸ್ ಮತ್ತು ಕ್ರೊಯೇಶಿಯ ನಡುವಿನ ಫೈನಲ್ ಪಂದ್ಯವನ್ನೂ ವೀಕ್ಷಿಸದೆ ಇರಲಾರರು. ಇತ್ತೀಚಿನ ವರ್ಷಗಳಲ್ಲಿ ಅಧೀರ್ ಫುಟ್ಬಾಲ್ ಫೈನಲ್‌ನ ಎಲ್ಲ ಪಂದ್ಯಗಳನ್ನು ಮೈದಾನದಲ್ಲೇ ವೀಕ್ಷಿಸಿದ್ದಾರೆ. ಈ ಬಾರಿಯೂ ಅವರು ಬಹಳ ಕಷ್ಟಪಟ್ಟು ಟಿಕೆಟ್ ಪಡೆದುಕೊಂಡಿದ್ದಾರೆ ಮತ್ತು ಫುಟ್ಬಾಲ್ ಸ್ಟೇಡಿಯಂನಲ್ಲಿ ಕ್ರೊಯೇಶಿಯ ತಂಡವನ್ನು ಬೆಂಬಲಿಸಲಿದ್ದಾರೆ. ಹೌದು, ಅಧೀರ್, ಅಂಡರ್ ಡಾಗ್‌ಗಳೆಂದು ಪರಿಗಣಿಸಲ್ಪಟ್ಟಿದ್ದ ಕ್ರೊಯೇಶಿಯ ತಂಡವನ್ನು ಬೆಂಬಲಿಸುತ್ತಿದ್ದಾರೆ. ಸದ್ಯ ಅವರ ಪಕ್ಷದ ಪರಿಸ್ಥಿತಿಯೂ ಅಂಡರ್ ಡಾಗ್‌ಗಿಂತ ಹೆಚ್ಚೇನಿಲ್ಲ, ರಾಜ್ಯದಲ್ಲೂ ಮತ್ತು ಕೇಂದ್ರದಲ್ಲೂ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News