ರಾಜಕೀಯ ಸುಳಿಯಲ್ಲಿ ಸೇಕ್ರೆಡ್ ಗೇಮ್ಸ್

Update: 2018-07-15 05:45 GMT

ನೆಟ್ ಫ್ಲಿಕ್ಸ್ ನ ಚೊಚ್ಚಲ ಭಾರತೀಯ ವೆಬ್ ಸೀರಿಸ್ ’ಸೇಕ್ರೆಡ್ ಗೇಮ್ಸ್’ನ ಮೊದಲ ಕಂತು ಬಿಡುಗಡೆಯಾಗಿದೆ. ಗ್ಯಾಂಗ್ ಸ್ಟರ್ ಮತ್ತು ಪೊಲೀಸ್ ಅಧಿಕಾರಿಯ ನಡುವಿನ ’ಕಳ್ಳ-ಪೊಲೀಸ್’ ಆಟದಲ್ಲಿ ಈ ಸೀರೀಸ್‌ನ ರೋಚಕತೆ ಅಡಗಿದೆ. ಈ ಸೀರೀಸ್ ಒಂದು ಉತ್ತಮ ಥ್ರಿಲ್ಲರ್ ಚಿತ್ರ ಎನ್ನುವ ಕಾರಣಕ್ಕಾಗಿ ಮಾತ್ರವಲ್ಲ, ಕೆಲವು ರಾಜಕೀಯ ಕಾರಣಗಳಿಗಾಗಿಯೂ ಸುದ್ದಿಯಾಗುತ್ತಿದೆ. ರಾಜೀವ್ ಗಾಂಧಿಯ ಕುರಿತಂತೆ ಈ ಚಿತ್ರ ಕೆಟ್ಟ ಮಾತುಗಳನ್ನಾಡುತ್ತದೆ ಎನ್ನುವುದು ಚಿತ್ರದ ಮೇಲಿನ ಆರೋಪ. ಈಗಾಗಲೇ ಕೆಲವರು ಇದರ ಬಗ್ಗೆ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.

ಇನ್‌ಸ್ಪೆಕ್ಟರ್ ಸರ್ತಾಜ್ ಸಿಂಗ್ (ಸೈಫ್ ಅಲಿ ಖಾನ್) ಹಾಗೂ ಗಣೇಶ್ ಗಾಯತೊಂಡೆ (ನವಾಝುದ್ದೀನ್ ಸಿದ್ದೀಕಿ) ಈ ವೆಬ್ ಸೀರೀಸ್‌ನ ಮುಖ್ಯ ಪಾತ್ರಗಳು. ಇನ್‌ಸ್ಪೆಕ್ಟರ್ ಆಗಿರುವ ಸರ್ತಾಜ್ ಸಿಂಗ್ ಒಬ್ಬ ಪ್ರಾಮಾಣಿಕ ಅಧಿಕಾರಿ. ಹಲವು ಬಾರಿ ಹಣ, ಹೆಣ್ಣು ಮತ್ತು ಯಶಸ್ಸಿನ ತುಡಿತಕ್ಕೆ ಒಳಗಾಗಿದ್ದರೂ ಆತ ಎಂದೂ ಅದಕ್ಕೆ ಬಲಿಯಾಗುವುದಿಲ್ಲ. ಒಂದು ಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ಇಲಾಖೆ ಜತೆ ಸಹಕರಿಸದ ಕಾರಣಕ್ಕಾಗಿ ಸರ್ತಾಜ್ ಅಮಾನತುಗೊಳ್ಳುತ್ತಾನೆ. ನಂತರ ಅಪಾರ್ಟ್ ಮೆಂಟ್‌ನಲ್ಲಿ ಏಕಾಂಗಿಯಾಗಿ ಜೀವನ ಕಳೆಯುತ್ತಾ ಇರುತ್ತಾನೆ.

ಅಂತಿಮವಾಗಿ ಹಲವು ವರ್ಷ ಹೆಣಗಾಟದ ಬಳಿಕವೂ ಎಸೈ ಆಗಿಯೇ ಉಳಿಯುತ್ತಾನೆ. ಅದಕ್ಷ ಅಧಿಕಾರಿ ಎಂದು ಬಿಂಬಿಸಲ್ಪಡುತ್ತಾನೆ. ಆದರೆ ಅಂತಿಮವಾಗಿ ಆತನ ಫೋನ್ ರಿಂಗಣಿಸುತ್ತದೆ. ಫೋನ್‌ನ ಇನ್ನೊಂದು ತುದಿಯಲ್ಲಿ ಜಿ-ಕಂಪೆನಿಯ ಬಾಸ್, 17 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಗ್ಯಾಂಗ್‌ಸ್ಟರ್, 150 ಕೊಲೆ ಪ್ರಕರಣಗಳ ಆರೋಪಿ, ಭೀತಿ ಹುಟ್ಟಿಸುವ ವ್ಯಕ್ತಿತ್ವ: ಗಣೇಶ್ ಗಾಯ್ತಿಂಡೆ.

ಗಾಯ್ತಂಡೆ ತನ್ನದೇ ಕಥೆಯನ್ನು ಸರ್ತಾಜ್‌ಗೆ ಹೇಳುತ್ತಾನೆ. ಬಡ ಭಿಕ್ಷುಕನ ಮಗನಾಗಿ ಹುಟ್ಟಿದ ತಾನು ಮುಂಬೈನ ಕಸದ ಗುಡ್ಡೆಯಿಂದ ಸಾಮ್ರಾಜ್ಯ ಕಟ್ಟಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ವಿವರಿಸುತ್ತಾನೆ. ಮುಂಬೈ 25 ದಿನಗಳಲ್ಲಿ ಪತನವಾಗುತ್ತದೆ ಎಂದು ಹೇಳುತ್ತಾನೆ. ಆನಂತರ ಕಳ್ಳ-ಪೊಲೀಸ್ ಆಟ ಶುರುವಾಗುತ್ತದೆ.

ನಿರ್ದೇಶನದ ಹೊಣೆಯನ್ನು ಅನುರಾಗ್ ಕಶ್ಯಪ್ ಹಾಗೂ ವಿಕ್ರಮಾದಿತ್ಯ ಮೋಟ್ವಾನೆ ಹಂಚಿಕೊಂಡಿದ್ದು, ಅದ್ಭುತ ಕಥಾಚಿತ್ರ ಸೃಷ್ಟಿಸಿದ್ದಾರೆ. ಕೇಂದ್ರ ಪಾತ್ರಗಳ ವರಸೆ, ನಗರದ ತಳಮಳ, ಭ್ರಷ್ಟಾಚಾರ ಮುಗಿಲು ಮುಟ್ಟಿರುವುದು ಹೀಗೆ ಪರಿಪೂರ್ಣ ಕಥೆ. ಇದೆಲ್ಲವನ್ನೂ ಮೀರಿಸುವಂಥ ಅದ್ಭುತ ನಟನೆ ನವಾಝುದ್ದೀನ್ ಸಿದ್ದೀಕಿಯಿಂದ ಮೂಡಿಬಂದಿದೆ.

ಗಣೇಶ್ ಗಾಯ್ತಂಡೆ ಹಲವು ವರ್ಷಗಳವರೆಗೆ ನೆನಪಿನಲ್ಲಿ ಉಳಿಯುವಂಥ ಪಾತ್ರ. ಇದು ನವಾಝುದ್ದೀನ್ ಅಭಿನಯ ಕೌಶಲಕ್ಕೆ ಸಾಕ್ಷಿಯಾಗಿದೆ. ಸರ್ತಾಜ್ ಪಾತ್ರದಲ್ಲಿ ಸೈಫ್ ಅಲಿಖಾನ್ ಮಿಂಚಿದ್ದಾರೆ.

ಲೇಖಕರಾದ ಅರುಣ್ ಗ್ರೋವರ್, ಸ್ಮಿತಾ ಸಿಂಗ್ ಮತ್ತು ವಸಂತ್‌ನಾಥ್ ಅವರ ಅದ್ಭುತ ಕೆಲಸದ ಬಗ್ಗೆ ಹೇಳಲು ಪದಗಳೇ ಇಲ್ಲ. ರಸವತ್ತಾದ ಅಪರಾಧದ ಜತೆಗೆ ವಿಕ್ರಂ ಚಂದ್ರ ಅವರ ಅದ್ಭುತ ಕಾದಂಬರಿಯ ಉಪಶೀರ್ಷಿಕೆಯನ್ನು ಉಳಿಸಿಕೊಂಡಿದ್ದಾರೆ. ಅದಕ್ಕೆ ಒತ್ತು ನೀಡಿ, ಹೆಚ್ಚು ಪ್ರಸ್ತುತ ವಾಗಿಸಿದ್ದಾರೆ. ಗಾಯ್ತೆಂಡೆ ಮತ್ತು ಸರ್ತಾಜ್ ಆಟಗಳು ಅನಾವರಣಗೊಳ್ಳುತ್ತಿದ್ದಂತೆಯೇ, ಕೀಳುಮಟ್ಟದ ರಾಜಕೀಯ ಘಟನಾವಳಿಗಳನ್ನೊಳಗೊಂಡ ಸೇಕ್ರೆಡ್ ಗೇಮ್ಸ್ ನ ಎರಡನೇ ಭಾಗದಲ್ಲಿ ಇಂದಿರಾಗಾಂಧಿ ಮತ್ತು ರಾಜೀವ್‌ಗಾಂಧಿ ನೇತೃತ್ವದ ಕಾಂಗ್ರೆಸ್ ಆಡಳಿತ ಮತ್ತು ಪ್ರಸ್ತುತ ಆಡಳಿತ, ಕೋಮುವಾದವನ್ನು ಸಮೀಕರಿಸಿ ಟೀಕಿಸಲಾಗಿದೆ.

ನೆಟ್ ಫ್ಲಿಕ್ಸ್‌ನ ಚೊಚ್ಚಲ ಭಾರತೀಯ ವೆಬ್ ಸೀರೀಸ್ ಆದ ‘ಸೇಕ್ರೆಡ್ ಗೇಮ್ಸ್’ ವೀಕ್ಷಕನನ್ನು ಸೀಟಿನ ಅಂಚಿಗೆ ತಂದು ಕೂರಿಸುವ ಅದ್ಭುತ ಥ್ರಿಲ್ಲರ್ ಎಂದರೆ ತಪ್ಪಾಗಲಾರದು.

ತಾರಾಗಣ:

ಸೈಫ್ ಅಲಿ ಖಾನ್, ನವಾಝುದ್ದೀನ್ ಸಿದ್ದೀಕಿ, ರಾಧಿಕಾ ಆಪ್ಟೆ, ನೀರಜ್ ಕಬಿ, ಆಮೀರ್ ಬಶೀರ್, ಪಂಕಜ್ ತ್ರಿಪಾಠಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News