ದತ್ತಾಂಶ ಸೋರಿಕೆ ಹಗರಣ: ಫೇಸ್‌ಬುಕ್ ಪ್ರತಿಕ್ರಿಯೆ ಹಂಚಿಕೊಳ್ಳಲು ಕೇಂದ್ರ ನಿರಾಕರಣೆ

Update: 2018-07-15 17:32 GMT

ಹೊಸದಿಲ್ಲಿ, ಜು. 15: ಲಂಡನ್ ಮೂಲದ ಕೇಂಬ್ರಿಜ್ ಅನಾಲಿಟಿಕಾ ಭಾಗಿಯಾಗಿರುವ ಜಾಗತಿಕ ದತ್ತಾಂಶ ಸೋರಿಕೆ ಹಗರಣದ ಕುರಿತು ಫೇಸ್‌ಬುಕ್‌ನಿಂದ ಸ್ವೀಕರಿಸಲಾದ ಪ್ರತಿಕ್ರಿಯೆ ಪ್ರತಿಯನ್ನು ಹಂಚಿಕೊಳ್ಳಲು ಭಾರತ ಸರಕಾರ ನಿರಾಕರಿಸಿದೆ.

 ‘‘ಕಂಪೆನಿಗಳು ವಿಶ್ವಾಸದಿಂದ ಮಾಹಿತಿ ಹಂಚಿಕೊಂಡಿರು ವುದರಿಂದ ಸ್ವೀಕರಿಸಲಾದ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ತಮ್ಮ ಪತ್ರ ಒಳಗೊಂಡಿರುವ ಮಾಹಿತಿಯನ್ನು ಗೌಪ್ಯವಾಗಿ ಇರಿಸಬೇಕು ಎಂದು ಕಂಪೆನಿಗಳು ಮನವಿ ಮಾಡಿವೆ ಹಾಗೂ ಪ್ರಾಧಿಕಾರದ ಬಳಕೆಗೆ ಮಾತ್ರ ಸಲ್ಲಿಸಿದ್ದಾರೆ’’ ಎಂದು ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನದ ಸಚಿವಾಲಯ ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾದ ಮನವಿಗೆ ಪ್ರತಿಕ್ರಿಯಿಸಿದೆ.

ಸಚಿವಾಲಯ ರವಾನಿಸಿದ ನೋಟಿಸಿಗೆ ಕೇಂಬ್ರಿಜ್ ಅನಾಲಿಟಿಕಾ ಹಾಗೂ ಫೇಸ್‌ಬುಕ್‌ನಿಂದ ಸ್ವೀಕರಿಸಲಾದ ಪ್ರತಿಕ್ರಿಯೆ ಪ್ರತಿಯನ್ನು ನೀಡುವಂತೆ ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾದ ಮನವಿಯಲ್ಲಿ ಕೋರಲಾಗಿತ್ತು. ಕೇಂಬ್ರಿಜ್ ಅನಾಲಿಟಿಕಾ ಭಾಗಿಯಾಗಿರುವ ಜಾಗತಿಕ ದತ್ತಾಂಶ ಸೋರಿಕೆಯಿಂದ ಭಾರತದ ಸುಮಾರು 5.6 ಲಕ್ಷ ಜನರಿಗೆ ತೊಂದರೆ ಉಂಟಾಗಿರುವ ಸಾಧ್ಯತೆ ಇದೆ ಎಂದು ಫೇಸ್ ಬುಕ್ ಎಪ್ರಿಲ್‌ನಲ್ಲಿ ಪ್ರತಿಪಾದಿಸಿತ್ತು ಹಾಗೂ ತನ್ನ ಒಪ್ಪಿಗೆ ಇಲ್ಲದೆ ಇಂಗ್ಲೆಂಡ್ ಮೂಲದ ಸಂಸ್ಥೆ ದತ್ತಾಂಶಗಳನ್ನು ಬಳಸಿಕೊಂಡಿದೆ ಎಂದು ಹೇಳಿತ್ತು.

ದತ್ತಾಂಶ ಸೋರಿಕೆ ಬೆಳಕಿಗೆ ಬಂದ ಬಳಿಕ ಸಚಿವಾಲಯ ಈ ವರ್ಷ ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡುವಂತೆ ಕೋರಿ ಫೇಸ್‌ಬುಕ್ ಹಾಗೂ ಕೇಂಬ್ರಿಜ್ ಅನಾಲಿಟಿಕಾದೊಂದಿಗೆ ಸಂವಹನ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News