ಡೆಬಿಟ್ ಕಾರ್ಡ್ ಸೇವೆಗಳಿಗೆ ನಿಮ್ಮ ಬ್ಯಾಂಕು ಎಷ್ಟು ಶುಲ್ಕ ವಿಧಿಸುತ್ತದೆ ಗೊತ್ತೇ...?

Update: 2018-07-16 11:25 GMT

ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹಲವಾರು ಸೇವೆಗಳನ್ನು ಒದಗಿಸುತ್ತಿದ್ದು,ಇದರಿಂದಾಗಿ ಗ್ರಾಹಕರಿಗೆ ಬ್ಯಾಂಕಿಂಗ್ ಕೆಲಸಗಳು ಹೆಚ್ಚು ಸುಲಭವಾಗಿವೆ. ಡೆಬಿಟ್ ಅಥವಾ ಎಟಿಎಂ ಕಾರ್ಡ್ ವಿತರಣೆ ಇಂತಹ ಸೇವೆಗಳಲ್ಲೊಂದಾಗಿದೆ. ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಮೊದಲ ಬಾರಿಗೆ ಡೆಬಿಟ್ ಕಾರ್ಡ್‌ನ್ನು ಉಚಿತವಾಗಿ ನೀಡುತ್ತವೆಯಾದರೂ ಅವುಗಳ ಮರುವಿತರಣೆಯಿಂದ ಹಿಡಿದು ವಾರ್ಷಿಕ ನಿರ್ವಹಣೆವರೆಗಿನ ಸೇವೆಗಳಿಗೆ ಶುಲ್ಕಗಳನ್ನು ವಿಧಿಸಲಾಗುತ್ತದೆ. ಕಾರ್ಡ್ ಕಳೆದು ಹೋಗಿದ್ದರೆ ಅಥವಾ ಕಳ್ಳತನವಾಗಿದ್ದರೆ ಬದಲಿ ಕಾರ್ಡ್ ವಿತರಣೆ,ಭೌತಿಕ ಪಿನ್ ಮರುಸೃಷ್ಟಿ ಮತ್ತು ವಾರ್ಷಿಕ ನಿರ್ವಹಣೆ ಶುಲ್ಕಗಳ ಮೇಲೆ ಜಿಎಸ್‌ಟಿಯನ್ನೂ ವಸೂಲು ಮಾಡಲಾಗುತ್ತದೆ.

ನಿಮ್ಮ ಡೆಬಿಟ್ ಕಾರ್ಡ್ ಕಳೆದುಹೋಗಿದ್ದರೆ ಅಥವಾ ಕಳ್ಳತನವಾಗಿದ್ದರೆ ಹೊಸ ಕಾರ್ಡ್‌ನ್ನು ನೀಡಲು ಎಸ್‌ಬಿಐ,ಐಸಿಐಸಿಐ,ಎಚ್‌ಡಿಎಫ್‌ಸಿ,ಪಿಎನ್‌ಬಿ ಮತ್ತು ಎಕ್ಸಿಸ್ ಬ್ಯಾಂಕ್‌ಗಳು 200 ರೂ. ಶುಲ್ಕ ವಿಧಿಸುತ್ತವೆ. ಯೆಸ್ ಬ್ಯಾಂಕು 149 ರೂ.ವಿಧಿಸುತ್ತಿದ್ದರೆ, ಬ್ಯಾಂಕ್ ಆಫ್ ಇಂಡಿಯಾ 120 ರೂ.ಶುಲ್ಕವನ್ನು ಪಡೆದುಕೊಳ್ಳುತ್ತದೆ.

ವಾರ್ಷಿಕ ಮೆಂಟೇನನ್ಸ್ ಅಥವಾ ನಿರ್ವಹಣೆ ಶುಲ್ಕ(ಎಎಂಸಿ) ಗ್ರಾಹಕರಿಗೆ ವಿತರಿಸಲಾದ ಕಾರ್ಡ್‌ಗಳ ಸ್ವರೂಪವನ್ನು ಅವಲಂಬಿಸಿರುತ್ತದೆ. ಕ್ಲಾಸಿಕ್ ಕಾರ್ಡ್‌ಗಳಿಗೆ ಎಸ್‌ಬಿಐ,ಎಚ್‌ಡಿಎಫ್‌ಸಿ,ಪಿಎನ್‌ಬಿ ಮತ್ತು ಎಕ್ಸಿಸ್‌ನಂತಹ ಹೆಚ್ಚಿನ ಬ್ಯಾಂಕುಗಳು 100ರಿಂದ 150 ರೂ.ವರೆಗೆ ಎಎಂಸಿಯನ್ನು ವಸೂಲು ಮಾಡುತ್ತವೆ. ಬ್ಯಾಂಕ್ ಆಫ್ ಇಂಡಿಯಾ ಅರೆನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 60 ರೂ. ಹಾಗೂ ಮಹಾನಗರ ಮತ್ತು ನಗರ ಪ್ರದೇಶಗಳಲ್ಲಿ 120 ರೂ.ಎಎಂಸಿಯನ್ನು ವಿಧಿಸುತ್ತದೆ.

ಐಸಿಐಸಿಐ ಬ್ಯಾಂಕ್ ತನ್ನ ಸಾದಾ ಡೆಬಿಟ್ ಕಾರ್ಡ್‌ಗಳಿಗೆ ಯಾವುದೇ ಎಎಂಸಿ ವಿಧಿಸುವುದಿಲ್ಲ. ಆದರೆ ತನ್ನ ಕೋರಲ್ ಡೆಬಿಟ್ ಕಾರ್ಡ್‌ಗೆ ಅದು 499 ರೂ.ಆರಂಭಿಕ ಶುಲ್ಕ ಮತ್ತು ಅಷ್ಟೇ ಎಎಂಸಿಯನ್ನು ವಿಧಿಸುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕು ತನ್ನ ಪ್ಲಾಟಿನಂ ಡೆಬಿಟ್ ಕಾರ್ಡ್‌ಗೆ 750 ರೂ.ಎಎಂಸಿ ವಿಧಿಸುತ್ತಿದ್ದರೆ,ಯೆಸ್ ಬ್ಯಾಂಕಿನ ಫಸ್ಟ್ ವರ್ಲ್ಡ್ ಡೆಬಿಟ್ ಕಾರ್ಡ್‌ಗೆ 2,499 ರೂ.ಎಎಂಸಿಯನ್ನು ಪಾವತಿಸಬೇಕಾಗುತ್ತದೆ. ಆದರೆ ಅದು ತನ್ನ ಕೆಲವು ನಿರ್ದಿಷ್ಟ ಗ್ರಾಹಕರಿಗೆ ಈ ಶುಲ್ಕವನ್ನು ಮನ್ನಾ ಮಾಡುತ್ತದೆ. ಯೆಸ್ ಬ್ಯಾಂಕಿನ ಪ್ಲಾಟಿನಂ ಕಾರ್ಡ್‌ನ ಎಎಂಸಿ 599 ರೂ.ಆಗಿದೆ.

ಡೆಬಿಟ್ ಕಾರ್ಡ್‌ನ ಪಿನ್ ಮರುಸೃಷ್ಟಿಗಾಗಿ ಎಸ್‌ಬಿಐ,ಪಿಎನ್‌ಬಿ,ಯೆಸ್ ಬ್ಯಾಂಕ್ ಮತ್ತು ಎಕ್ಸಿಸ್‌ನಂತಹ ಹೆಚ್ಚಿನ ಬ್ಯಾಂಕುಗಳು 50 ರೂ.ಶುಲ್ಕವನ್ನು ವಿಧಿಸುತ್ತವೆ. ಆದರೆ ಗ್ರಾಹಕರು ನೆಟ್‌ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಬಳಸಿಕೊಂಡು ಪಿನ್ ಮರುಸೃಷ್ಟಿ ಮಾಡಿಕೊಂಡರೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಐಸಿಐಸಿಐ ಬ್ಯಾಂಕು ಈ ಸೇವೆಗಾಗಿ 25 ರೂ.ಶುಲ್ಕ ನಿಗದಿಪಡಿಸಿದೆ. ಆದರೆ ಶಾಖೆ/ಕಸ್ಟಮರ್ ಕೇರ್‌ನಲ್ಲಿ ಇನ್‌ಸ್ಟಾಪಿನ್ ಮೂಲಕ ಪಿನ್ ಮರುಸೃಷ್ಟಿಯ ಕೋರಿಕೆಗೆ ಯಾವುದೇ ಶುಲ್ಕ ಅನ್ವಯವಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News