ಅಮರನಾಥ ಯಾತ್ರೆಯ ವೇಳೆ ವ್ಯಕ್ತಿ ಸಾವು: ಇಬ್ಬರು ಯಾತ್ರಾರ್ಥಿಗಳು ವಶಕ್ಕೆ

Update: 2018-07-16 14:39 GMT
ಸಾಂದರ್ಭಿಕ ಚಿತ್ರ

ಶ್ರೀನಗರ, ಜು.16: ಅಮರನಾಥ ದೇಗುಲಕ್ಕೆ ಯಾತ್ರಾರ್ಥಿಗಳಾಗಿ ತೆರಳಿದ್ದ ವೇಳೆ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಮೃತದೇಹವನ್ನು ಅಧಿಕಾರಿಗಳಿಗೆ ಮಾಹಿತಿ ನೀಡದೆ ಬೈಕ್‌ನಲ್ಲಿ ಹುಟ್ಟೂರಿಗೆ ಕೊಂಡೊಯ್ಯುತ್ತಿದ್ದ ಇಬ್ಬರು ಯಾತ್ರಾರ್ಥಿಗಳನ್ನು ವಿಚಾರಣೆ ನಡೆಸುವ ಉದ್ದೇಶದಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

20ರ ಹರೆಯದ ಬಲ್ಕಾರ್ ಸಿಂಗ್ ಎಂಬಾತ ಯಾತ್ರೆಯಿಂದ ಹಿಂದಿರುಗುತ್ತಿದ್ದ ವೇಳೆ ಜಮ್ಮುವಿನ ರಾಂಬನ್ ಜಿಲ್ಲೆಯಲ್ಲಿ ಮೃತಪಟ್ಟಿದ್ದ. ಆದರೆ ಈ ಮಾಹಿತಿಯನ್ನು ಅಧಿಕಾರಿಗಳಿಗೆ ತಿಳಿಸದೆ ಶವವನ್ನು ಬಲ್ಕಾರ್ ಸಿಂಗ್‌ನ ಹುಟ್ಟೂರು ಪಂಜಾಬ್‌ಗೆ ಸಾಗಿಸಲು ಯತ್ನಿಸಿದ ಇಬ್ಬರನ್ನು ವಿಚಾರಣೆ ನಡೆಸುವ ಉದ್ದೇಶದಿಂದ ಬಂಧಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಲ್ಕಾರ್ ಸಿಂಗ್ ಸಾವಿನ ಕುರಿತು ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ ಎಂದು ರಾಂಬನ್ ಜಿಲ್ಲಾ ಪೊಲೀಸ್ ಅಧೀಕ್ಷಕ ಮೋಹನ್‌ಲಾಲ್ ತಿಳಿಸಿದ್ದಾರೆ. ಬೈಕ್ ಸವಾರ ಹಾಗೂ ಹಿಂಬದಿ ಸವಾರನ ಮಧ್ಯೆ ಚಲನೆಯಿಲ್ಲದ ವ್ಯಕ್ತಿಯೋರ್ವನನ್ನು ಹೊಂದಿರುವ ವಾಹನವನ್ನು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಹಚ್ಚಿದ ಪೊಲೀಸರು ಅವರನ್ನು ವಿಚಾರಣೆಗಾಗಿ ತಡೆದು ನಿಲ್ಲಿಸಿದಾಗ ಮಧ್ಯದಲ್ಲಿದ್ದ ವ್ಯಕ್ತಿ ಮೃತನಾಗಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ವಾಹನ ಸವಾರರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ. ತಾವು ಪಂಜಾಬ್‌ನ ತರಣ್ ತಾರಣ್ ಗ್ರಾಮದವರಾಗಿದ್ದು , ಅಮರನಾಥ ಯಾತ್ರೆ ಮುಗಿಸಿದ ಬಳಿಕ ಕಾಶ್ಮೀರದ ಪಹಲ್‌ಗಾಂವ್ ದಾರಿಯಾಗಿ ಹಿಂದಿರುಗುತ್ತಿದ್ದಾಗ ಬಲ್ಕಾರ್ ಸಿಂಗ್ ಅಸೌಖ್ಯಕ್ಕೆ ಒಳಗಾದ. ಅಲ್ಲಿ ಆತನಿಗೆ ಔಷಧ ನೀಡಿ ಜಮ್ಮುವಿನತ್ತ ಪ್ರಯಾಣ ಮುಂದುವರಿಸಿದ್ದೇವೆ. ಮಾರ್ಗ ಮಧ್ಯೆ ಆತ ಮೃತಪಟ್ಟಿರುವುದು ಗಮನಕ್ಕೆ ಬಂದರೂ ಆತನ ಮನೆಗೆ ಮೃತದೇಹವನ್ನು ತಲುಪಿಸುವ ಉದ್ದೇಶ ತಮ್ಮದಾಗಿತ್ತು ಎಂದು ಬಂಧಿತರು ತಿಳಿಸಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಯಿಂದ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಮೋಹನ್‌ಲಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News