ನೇತಾಜಿ ಸುಭಾಷ್ ಚಂದ್ರ ಬೋಸ್ ಹೃದಯದಲ್ಲಿ ಚೀನಾಕ್ಕೆ ವಿಶೇಷ ಸ್ಥಾನವಿತ್ತು:ನೇತಾಜಿ ಮರಿಮೊಮ್ಮಗ

Update: 2018-07-16 14:45 GMT

ಕೋಲ್ಕತಾ,ಜು.16: ಚೀನಾ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿತ್ತು ಎಂದು ನೇತಾಜಿ ರಿಸರ್ಚ್ ಬ್ಯೂರೊ(ಎನ್‌ಆರ್‌ಬಿ)ದ ನಿರ್ದೇಶಕರಾಗಿರುವ ಶಿಕ್ಷಣತಜ್ಞ ಹಾಗೂ ನೇತಾಜಿಯವರ ಮರಿಮೊಮ್ಮಗ ಪ್ರೊ.ಸುಗತ ಬೋಸ್ ಅವರು ಹೇಳಿದ್ದಾರೆ.

ಶನಿವಾರ ಸಂಜೆ ಎನ್‌ಆರ್‌ಬಿಯಲ್ಲಿ ಏರ್ಪಡಿಸಲಾಗಿದ್ದ ‘ಆಧುನಿಕ ಇತಿಹಾಸದಲ್ಲಿ ಚೀನಾ-ಭಾರತ ಸಂಬಂಧಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಅವರು,ನೇತಾಜಿಯವರು 80 ವರ್ಷಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಡಾ.ಅಟಲ್ ನೇತೃತ್ವದಲ್ಲಿ ವೈದ್ಯಕೀಯ ತಂಡವೊಂದನ್ನು ಚೀನಾಕ್ಕೆ ಕಳುಹಿಸಿದ್ದರು ಎಂದು ತಿಳಿಸಿದರು. ವಿದೇಶಗಳಿಂದ ಹಲವಾರು ಗಣ್ಯರು ಸಂಕಿರಣದಲ್ಲಿ ಪಾಲ್ಗೊಂಡಿದ್ದರು.

ಬಂಗಾಳದ ಹಲವಾರು ಗಣ್ಯರು ಚೀನಾಕ್ಕೆ ಯಾವಾಗಲೂ ವಿಶೇಷ ಸ್ಥಾನವನ್ನು ನೀಡಿದ್ದರು. ಕವಿ ರವೀಂದ್ರನಾಥ ಟಾಗೋರ್ ಅವರು 1924ರಲ್ಲಿ ಆ ರಾಷ್ಟ್ರಕ್ಕೆ ಭೇಟಿ ನೀಡಿದ್ದು,ಇದು ಚೀನಾ ಮತ್ತು ಟಾಗೋರ್ ಹಾಗೂ ವಿಶ್ವಭಾರತಿ ನಡುವೆ ಸುದೀರ್ಘ ಸಂಬಂಧಕ್ಕೆ ನಾಂದಿ ಹಾಡಿತ್ತು ಎಂದು ಹೇಳಿದ ಬೋಸ್,1949ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾದ ಸ್ಥಾಪನಾ ದಿನ ಮತ್ತು ಶರತ್ ಚಂದ್ರ ಬೋಸ್ ಅವರು ಮಾವೊ ಝೆಡಾಂಗ್ ಅವರೊಂದಿಗೆ ಶುಭಾಶಯದ ಟೆಲಿಗ್ರಾಮ್‌ಗಳನ್ನು ವಿನಿಮಯಿಸಿಕೊಂಡಿದ್ದನ್ನು ಸ್ಮರಿಸಿಕೊಂಡರು.

ಹಾರ್ವಡ್ ವಿವಿಯ ಶಿಕ್ಷಣತಜ್ಞ ಅರುಣಾಬ್ ಘೋಷ್ ಅವರು 1956ರಲ್ಲಿ ಕೋಲ್ಕತಾದ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ಗೆ ಝೌ ಎಲ್‌ಲೈ ಅವರ ಭೇಟಿ ಮತ್ತು 1957ರಲ್ಲಿ ಪಿ.ಸಿ.ಮಹಾಲನೋಬಿಸ್ ಅವರ ಚೀನಾ ಪ್ರವಾಸದ ಕುರಿತು ಮಾತನಾಡಿದರು.

1943,ಜುಲೈನಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯ ಸುಪ್ರೀಮ್ ಕಮಾಂಡರ್ ಆಗಿ ನೇತಾಜಿಯವರಿಂದ ಅಧಿಕಾರ ಸ್ವೀಕಾರದ 75ನೇ ವರ್ಷಚರಣೆಯ ಅಂಗವಾಗಿ ವಿಶೇಷ ಪ್ರದರ್ಶನವೊಂದನ್ನೂ ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News