ಧ್ವನಿವೇಗಾಧಿಕ ದಾಳಿ ಕ್ಷಿಪಣಿ ಬ್ರಹ್ಮೋಸ್‌ನ ಯಶಸ್ವಿ ಪರೀಕ್ಷಾರ್ಥ ಪ್ರಯೋಗ

Update: 2018-07-16 15:02 GMT

ಬಾಲಸೋರ,ಜು.16: ಸೋಮವಾರ ಚಂಡಿಪುರದ ಸಮಗ್ರ ಪರೀಕ್ಷಾ ವಲಯದಿಂದ ನಡೆಸಲಾದ ಧ್ವನಿವೇಗಾಧಿಕ ದಾಳಿ ಕ್ಷಿಪಣಿ ಬ್ರಹ್ಮೋಸ್‌ನ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

ಬೆಳಿಗ್ಗೆ 10:15ರ ಸುಮಾರಿಗೆ ಕ್ಷಿಪಣಿಯನ್ನು ಉಡಾವಣೆಗೊಳಿಸಲಾಗಿದ್ದು,ನಿಗದಿತ ಪಥದಲ್ಲಿ ಸಾಗಿದ ಅದು ಗುರಿಯನ್ನು ಯಶಸ್ವಿಯಾಗಿ ಭೇದಿಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯ ಮೂಲಗಳು ತಿಳಿಸಿದವು.

ಈ ವರ್ಷದ ಮೇ 21 ಮತ್ತು 22ರಂದು ಬ್ರಹ್ಮೋಸ್ ಕ್ಷಿಪಣಿಯ ಎರಡು ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಲಾಗಿದ್ದು,‘ಮೇಕ್ ಇನ್ ಇಂಡಿಯಾ’ ಅಭಿಯಾನದಡಿ ದೇಶಿಯವಾಗಿ ತಯಾರಿಸಲಾಗಿದ್ದ ಪ್ರಮುಖ ಉಪ-ವ್ಯವಸ್ಥೆಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸರಣಿ ಉಡಾವಣೆಗಳಿಂದ ಇಂಧನ ನಿರ್ವಹಣೆ ವ್ಯವಸ್ಥೆ ಮತ್ತು ಇತರ ನಾನ್-ಮೆಟಾಲಿಕ್ ಏರ್‌ಫ್ರೇಮ್ ಬಿಡಿಭಾಗಗಳು ಸೇರಿದಂತೆ ದೇಶಿಯವಾಗಿ ಅಭಿವೃದ್ಧಿಗೊಂಡಿರುವ ವ್ಯವಸ್ಥೆಗಳು ಕ್ಷಿಪಣಿಯ ಅಂಗವಾಗಿರಲು ಅರ್ಹತೆಯನ್ನು ಗಳಿಸಿವೆ ಎಂದು ಮೂಲಗಳು ಹೇಳಿದವು.

ಬ್ರಹ್ಮೋಸ್ ಕ್ಷಿಪಣಿಗಳನ್ನು ಡಿಆರ್‌ಡಿಒ ಮತ್ತು ರಷ್ಯಾದ ಎನ್‌ಪಿಒಎಮ್ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತಿದೆ. ಅತ್ಯಂತ ವೈವಿಧ್ಯಪೂರ್ಣವಾಗಿರುವ ಈ ಕ್ಷಿಣಿಗಳು ಈಗಾಗಲೇ ಭಾರತೀಯ ಸೇನೆ,ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News