ಭಾರತಕ್ಕೆ ಕುಮಾರಸ್ವಾಮಿಯಂತಹ ‘ದುರಂತ ನಾಯಕ’ನ ಅಗತ್ಯವಿಲ್ಲ: ಜೇಟ್ಲಿ

Update: 2018-07-16 15:12 GMT

ಹೊಸದಿಲ್ಲಿ, ಜು.16: ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ರವಿವಾರ ಸುದ್ದಿಗೋಷ್ಟಿಯಲ್ಲಿ ಭಾವೋದ್ವೇಗದಿಂದ ಕಣ್ಣೀರು ಹಾಕಿರುವುದನ್ನು ಟೀಕಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ದೇಶಕ್ಕೆ ಕುಮಾರಸ್ವಾಮಿಯಂತಹ ದುರಂತ ನಾಯಕನಲ್ಲ, ಮೋದಿಯಂತಹ ನಿರ್ಣಾಯಕ, ನಿಖರ ನಾಯಕನ ಅಗತ್ಯವಿದೆ ಎಂದಿದ್ದಾರೆ.

ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರದ ವಿರುದ್ಧ ಟೀಕಾಪ್ರಹಾರ ಮಾಡಿರುವ ಜೇಟ್ಲಿ, ಇಂತಹ ಅವಕಾಶವಾದಿ ಒಕ್ಕೂಟದ ಮುಖ್ಯ ಉದ್ದೇಶ ದೇಶಕ್ಕೆ ಸೇವೆ ಸಲ್ಲಿಸುವುದಲ್ಲ, ಅಸ್ತಿತ್ವ ಉಳಿಸಿಕೊಳ್ಳುವುದಾಗಿದೆ ಎಂದಿದ್ದಾರೆ. ರವಿವಾರ ಮಾತನಾಡಿದ್ದ ಕುಮಾರಸ್ವಾಮಿ, ಸಮ್ಮಿಶ್ರ ಸರಕಾರವನ್ನು ಮುನ್ನಡೆಸುವ ಭಾರವನ್ನು ವಿಷವನ್ನು ನುಂಗಿಕೊಂಡಿರುವ ಶಿವನ ಪರಿಸ್ಥಿತಿಗೆ ಹೋಲಿಸಿದ್ದರು. ಇದಕ್ಕೆ ಪ್ರತಿಯಾಗಿ ಫೇಸ್‌ಬುಕ್‌ನಲ್ಲಿ ಹೇಳಿಕೆ ಪೋಸ್ಟ್‌ಮಾಡಿರುವ ಜೇಟ್ಲಿ, ಕಾಂಗ್ರೆಸ್ ಪಕ್ಷ ಈ ಹಿಂದೆ ಚರಣ್ ಸಿಂಗ್, ಚಂದ್ರಶೇಖರ್, ಎಚ್.ಡಿ.ದೇವೇಗೌಡ, ಐ.ಕೆ..ಗುಜ್ರಾಲ್‌ರಿಗೆ ಮಾಡಿರುವುದನ್ನು ಕರ್ನಾಟಕದಲ್ಲಿ ಪುನರಾವರ್ತಿಸಲಿದೆ . ಮೋದಿಯನ್ನು ಹೊರಗಿಡುವುದು ಈ ಅವಕಾಶವಾದಿ ಒಕ್ಕೂಟದ ಏಕೈಕ ಅಜೆಂಡಾವಾಗಿದೆ ಎಂದು ತಿಳಿಸಿದ್ದಾರೆ.

ಸೈದ್ಧಾಂತಿಕ ಭಿನ್ನತೆಯಿರುವ ಪಕ್ಷಗಳ ಸಮ್ಮಿಶ್ರ ಸರಕಾರ ದೇಶವನ್ನು ಮುನ್ನಡೆಸಲು ಯೋಗ್ಯವಲ್ಲ ಎಂದ ಜೇಟ್ಲಿ, ಇಂತಹ ಸಮ್ಮಿಶ್ರ ಸರಕಾರ ವಿಷದ ಬಾಟಲಿ ಎಂದಾದರೆ ಅದನ್ನು ದೇಶದ ಮೇಲೆ ಹೊರಿಸುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ವಿಶ್ವದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆಯ ನಾಯಕ ಬಡಪಾಯಿಯಾಗಿರಬಾರದು ಎಂದ ಜೇಟ್ಲಿ, ಭಯೋತ್ಪಾದನೆಯನ್ನು ಮಟ್ಟಹಾಕುವಲ್ಲಿ ಓಟ್‌ಬ್ಯಾಂಕ್ ರಾಜಕೀಯ ಅಡ್ಡಿಯಾಗಬಾರದು ಎಂದರು. ಸಮ್ಮಿಶ್ರ ಸರಕಾರದ ಮಿತ್ರಪಕ್ಷಗಳ ಒತ್ತಡಕ್ಕೆ ಮಣಿಯುವ ಸರಕಾರ ದೇಶಕ್ಕೆ ಅಂಟಿದ ಶಾಪ ಹಾಗೂ ಹೊರೆಯಾಗಿದೆ ಎಂದು ಜೇಟ್ಲಿ ಹೇಳಿದರು. ಇಂತಹ ಒಕ್ಕೂಟದ ಮುಖಂಡ ಕ್ಯಾಮೆರಾದ ಎದುರು ಅತ್ತು ಕಣ್ಣೀರುಗರೆಯುವುದು, ಹೊಣೆಯಿಂದ ಮುಕ್ತನಾಗಲು ಬಯಸಿರುವುದಾಗಿ ಹೇಳುವುದು ಯುಪಿಎ-2 ಸರಕಾರದ ಆಡಳಿತಾವಧಿಯಲ್ಲಿದ್ದ ನಿಷ್ಕ್ರಿಯ ಸ್ಥಿತಿಗಿಂತಲೂ ಹೀನ ಸನ್ನಿವೇಶವಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ವಂಶಾಧಿಕಾರ ಪದ್ಧತಿಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಟೀಕಿಸಿದ ಅವರು, ಕೇವಲ ಒಂದು ಕುಟುಂಬದವರು ಮಾತ್ರ ದೇಶವನ್ನು ಆಳಬೇಕು ಎಂಬುದು ಕಾಂಗ್ರೆಸ್‌ನ ಇರಾದೆಯಾಗಿದೆ. ಯಾರಾದರೂ ಇತರರು ಅವಕಾಶ ಪಡೆದರೆ, ಅಂತವರು ಕೈಚೆಲ್ಲಿ ಸಾರ್ವಜನಿಕವಾಗಿ ಅಳುವಂತಹ ಹತಾಶ ಸ್ಥಿತಿಗೆ ಅವರನ್ನು ನೂಕಲಾಗುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News