ಮಗನನ್ನು ಕೊಂದ ಸುದ್ದಿ ಚಾನೆಲ್ ಗಳಲ್ಲಿ ಬಂದಾಗ ಮೊಮ್ಮಗನನ್ನು ಆಟವಾಡಿಸುತ್ತಿದ್ದೆ

Update: 2018-07-16 15:24 GMT

ಹೈದರಾಬಾದ್, ಜು. 16: ಕರ್ನಾಟಕದ ಬೀದರ್‌ನಲ್ಲಿ ಹೈದರಬಾದ್‌ನ ಹಳೆ ನಗರದ ಬರಕಾಸ್‌ನ ಮುಹಮ್ಮದ್ ಅಝಮ್ (32) ಅವರನ್ನು ಮಕ್ಕಳ ಅಪಹರಣಕಾರನೆಂದು ಶಂಕಿಸಿ ಗುಂಪೊಂದು ಥಳಿಸಿ ಹತ್ಯೆ ನಡೆಸಿದ ಘಟನೆಯ ವರದಿ ಟಿ.ವಿ. ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವಾಗ, ಅವರ ತಂದೆ ಮುಹಮ್ಮದ್ ಉಸ್ಮಾನ್ ಬರಕಾಸ್‌ನಲ್ಲಿರುವ ತನ್ನ ಮನೆಯ ಟೆರೇಸ್‌ನಲ್ಲಿ ಆಟಿಕೆಗಳನ್ನು ತೋರಿಸಿ ಅವರ 2 ವರ್ಷದ ಮೊಮ್ಮಗನಿಗೆ ತುತ್ತು ತಿನ್ನಿಸಲು ಪ್ರಯತ್ನಿಸುತ್ತಿದ್ದರು. ‘‘ತನ್ನ ಅಪ್ಪ ಎಲ್ಲಿ’’ ಎಂದು ಮೊಮ್ಮಗ ಕೇಳಿದಾಗ, ಉಸ್ಮಾನ್ ಅವರು ತನ್ನ ನೋವನ್ನು ಮರೆ ಮಾಚಿ ‘‘ಅಪ್ಪ ಬೇಗ ಬರುತ್ತಾನೆ’’ ಎಂದು ಭರವಸೆ ನೀಡುತ್ತಾ ಮಗುವನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದರು.

 ಅಝಂ ಪ್ರಯಾಣಿಸುತ್ತಿರುವ ಕಾರಿನತ್ತ ದೊಣ್ಣೆ, ಕಲ್ಲುಗಳೊಂದಿಗೆ ನುಗ್ಗಿದ ಗುಂಪು ಅವರನ್ನು ಥಳಿಸುತ್ತಿರುವ ವೀಡಿಯೋವನ್ನು ಕೆಲವೇ ಗಂಟೆಗಳ ಮುನ್ನ ಉಸ್ಮಾನ್ ಸೇರಿದಂತೆ ಅವರ ಕುಟುಂಬ ನೋಡಿದ್ದಾರೆ. ‘‘ಇದು ಜಂಗಲ್ ರಾಜ್. ಮಾನವರಿಗಿಂತ ಪ್ರಾಣಿಗಳೇ ಮೇಲು. ಪ್ರಾಣಿಗಳು ಹಸಿವೆಯಾದಾಗ ಮಾತ್ರ ದಾಳಿ ಮಾಡುತ್ತವೆ.’’ ಎಂದು ಅಝಮ್‌ನ ಕುಟುಂಬಸ್ತರು ಹೇಳಿದ್ದಾರೆ. 18 ತಿಂಗಳ ಮಗುವನ್ನು ಆರೈಕೆ ಮಾಡುವಾಗ, ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುವ ಬದಲು ದೇಶ ಇಂತಹ (ಆಗಂತುಕರನ್ನು ಹತ್ಯೆಗೈಯುವ ಜನರು) ಜನರಿಂದ ತುಂಬಿಕೊಂಡಿರುವುದರ ಬಗ್ಗೆ ಅವರು ಅಚ್ಚರಿಪಟ್ಟುಕೊಳ್ಳುತ್ತಾರೆ. ಅಝಮ್ ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು ಅಝಮ್ ಅವರ ಬಗ್ಗೆ ಹೇಳುವಾಗ ಒತ್ತರಿಸಿ ಬರುವ ದುಃಖವನ್ನು ತಡೆದುಕೊಳ್ಳುತ್ತಾರೆ. ‘‘ಇತರರನ್ನು ಹತ್ಯೆಗೈಯಲು ಬಯಸಲು ಜನರಿಗೆ ಏನಾಗಿದೆ ? ಅವರು ಏನು ಓದುತ್ತಾರೆ ? ಇದು ಜಂಗಲ್ ರಾಜ್ ಆಗುತ್ತಿದೆ. ಉದ್ಯೋಗ ಅಥವಾ ಇತರ ಕೆಲಸಗಳಿಗೆ ಜನರು ಮನೆಯಿಂದ ಹೊರಗಡೆ ಕಾಲಿರಿಸುವುದು ಅಸುರಕ್ಷಿತ ಎಂದು ಜನರು ಭಾವಿಸುತ್ತಿದ್ದಾರೆ’’ ಎಂದು ಅಝಮ್ ಅವರ ಮಾವ ಅನ್ಸಾರ್ ಅಲಿ ಹೇಳಿದ್ದಾರೆ.

 ಇಂಗ್ಲೆಂಡ್‌ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಬಳಿಕ ಅಝಮ್ ಸೌದಿ ಅರೇಬಿಯಾ ಹಾಗೂ ಕತರ್‌ನಲ್ಲಿ ವಿವಿಧ ಉದ್ಯೋಗ ಮಾಡಿದ್ದರೆ. ಅನಂತರ ಭಾರತಕ್ಕೆ ಬಂದು ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಅವರು ಹೈಟೆಕ್ ಸಿಟಿ (ಹೈದರಾಬಾದ್ ಇನ್‌ಫಾರ್ಮೇಶನ್ ಟೆಕ್ನಾಲಜಿ ಆ್ಯಂಡ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ ಸಿಟಿ) ಯಲ್ಲಿರುವ ಸಾಫ್ಟ್ ವೇರ್ ಕಂಪೆನಿ ಅಸೆಂಚರ್‌ನ ಉದ್ಯೋಗಿಯಾಗಿದ್ದರು. ಅಲ್ಲದೆ ಯು ಟ್ಯೂಬ್‌ನ ಯೋಜನೆ ಒಂದರಲ್ಲಿ ಕೂಡ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಇಬ್ಬರು ಸಹೋದರರಾದ ಮುಹಮ್ಮದ್ ಅಕ್ರಮ್ ಹಾಗೂ ಮುಹಮ್ಮದ್ ಅಸ್ಲಂ ಕೂಡ ಟೆಕ್ಕಿಗಳು. ಅಸ್ಲಂ ಕೂಡ ಅಸೆಂಚರ್‌ನ ಉದ್ಯೋಗಿ. ಅವರ ಸಹೋದರಿ ಫೌಸಿಯಾ ಬೇಗಂ ಪದವೀಧರೆ. ಗುರುವಾರ ಹಾಗೂ ಶುಕ್ರವಾರ ವಾರದ ರಜೆ ಆದುದರಿಂದ ಅಝಮ್ ಶುಕ್ರವಾರ ಮನೆಗೆ ಆಗಮಿಸುತ್ತಿದ್ದರು. ಅವರು ಕತರ್‌ನಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕತರ್ ನಿವಾಸಿ ಸಲ್ಹಾಮ್ ಈದ್ ಅಲ್ ಕುಬೈಸಿ, ನೂರ್ ಮುಹಮ್ಮದ್, ಮುಹಮ್ಮದ್ ಸಲ್ಮಾನ್ ಹಾಗೂ ಅವರ ಗೆಳೆಯ ಬೀದರ್ ಅಫ್ರೋಝ್ ಅವರೊಂದಿಗೆ ಬೀದರ್‌ಗೆ ತೆರಳಿದ್ದರು. ಕತರ್‌ನಲ್ಲಿ ಉದ್ಯೋಗಿಯಾಗಿದ್ದಾಗ ಅಝಮ್ ಸಲ್ಹಾಮ್‌ನ ನಿವಾಸದಲ್ಲಿ ವಾಸಿಸುತ್ತಿದ್ದರು. ಅಝಮ್ ಶನಿವಾರ 3.30ಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ, ರಾತ್ರಿ ವರೆಗೂ ಹಿಂದಿರುಗಿರಲಿಲ್ಲ. ಅನಂತರ ಅಝಮ್ ಮಾವ ಅನ್ಸಾರ್ ಅಲಿ ಅಝಮ್ ಅವರಿಗೆ ಫೋನ್ ಮಾಡಿದ್ದರು. ‘‘ಫೋನ್‌ನಲ್ಲಿ ಮಾತನಾಡಿದಾಗ ಪೊಲೀಸರು ಎಲ್ಲವೂ ಸರಿಯಾಗಿದೆ ಎಂದು ಉತ್ತರಿಸಿದ್ದರು. ಆಗ ನಾನು ಅಝಮ್ ಅವರೊಂದಿಗೆ ಮಾತನಾಡಬೇಕು ಎಂದು ಹೇಳಿದ್ದೆ. ಆಗ ಅವರು ಏನೂ ಸಂಭವಿಸಿಲ್ಲ. ಅವರಿಗೆ ಗ್ಲುಕೋಸ್ ನೀಡಲಾಗಿದೆ ಎಂದರು. ಸರಿಯಾದ ಉತ್ತರ ಸಿಗದೇ ಇದ್ದಾಗ ಅಝಮ್ ಅವರನ್ನು ಭೇಟಿಯಾಗಲು ನಾವು ಎಲ್ಲಿಗೆ ಬರಬೇಕು ಎಂದು ಪ್ರಶ್ನಿಸಿದೆ. ಆಗ ಅವರು ಬೀದರ್ ಸರಕಾರಿ ಆಸ್ಪತ್ರೆಗೆ ಹೋಗಿ ಎಂದರು. ಅನಂತರ ಫೋನ್ ಸ್ವಿಚ್ ಆಫ್ ಆಗಿತ್ತು’’ ಎಂದು ಅನ್ಸಾರ್ ಅಲಿ ತಿಳಿಸಿದ್ದಾರೆ. ಸಲಾಮ್‌ನ ಕುಟುಂಬಸ್ತರು ಹಾಗೂ ಇತರರು ಬೀದರ್‌ಗೆ ತೆರಳಿದಾಗ ಅಝಮ್ ಮೃತನಾಗಿರುವುದು ಗೊತ್ತಾಯಿತು. ಹೈದರಾಬಾದ್‌ನಲ್ಲಿ ಶನಿವಾರ ಸಂಜೆ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಅವರು ತಿಳಿಸಿದ್ದಾರೆ. ತಾನು ತುಂಬಾ ಕಡಿಮೆ ಸಂಬಳ ಪಡೆಯುತ್ತಿದ್ದೇನೆ. ತನ್ನ ಮನೆ ಮಾರಿದ್ದೇನೆ. ನಾಲ್ಕು ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ ತೆಗೆದುಕೊಂಡಿದ್ದೇನೆ ಎಂದು ಉಸ್ಮಾನ್ ಹೇಳಿದ್ದಾರೆ. ‘‘ಯಾವುದೇ ಮಗುವಿಗೆ ಕೂಡ ಇಂತಹ ಸ್ಥಿತಿ ಬರಬಾರದು. ಇದಕ್ಕೆ (ವ್ಯಾಟ್ಸ್‌ಆ್ಯಪ್ ವದಂತಿ ಕೇಳಿ ಹತ್ಯೆ) ಏನಾದರೂ ಮಾಡಿ ಎಂದು ನಾನು ತೆಲಂಗಾಣ ಹಾಗೂ ಕರ್ನಾಟಕ ಸರಕಾರವನ್ನು ಆಗ್ರಹಿಸುತ್ತೇನೆ’’ ಎಂದು ರೈಲ್ವೆ ಉದ್ಯೋಗಿಯಾಗಿರುವ ಉಸ್ಮಾನ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News