ಗಾಝಿಯಾಬಾದ್:ಐವರು ಅಪೇಕ್ಷಿತ ಕ್ರಿಮಿನಲ್‌ಗಳ ಸೆರೆ

Update: 2018-07-16 15:24 GMT

ಗಾಝಿಯಾಬಾದ್,ಜು.16: 2015ರಲ್ಲಿ ಹತ್ಯೆಯಾಗಿದ್ದ ಗ್ಯಾಂಗ್‌ಸ್ಟರ್ ವಿಕಿ ತ್ಯಾಗಿಯ ಪುತ್ರ ಸೇರಿದಂತೆ ಐವರು ‘ವಾಂಟೆಡ್’ ಪಾತಕಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಆಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

  ಮಾಹಿತಿಯ ಮೇರೆಗೆ ಶನಿವಾರ ರಾತ್ರಿ ಇಲ್ಲಿಯ ರಾಜನಗರ ಪ್ರದೇಶವನ್ನು ನಿರ್ಬಂಧಿಸಿದ್ದ ಪೊಲೀಸರು,ಈ ಅಪೇಕ್ಷಿತ ಕ್ರಿಮಿನಲ್‌ಗಳು ಪ್ರಯಾಣಿಸುತ್ತಿದ್ದ ಕಾರನ್ನು ತಡೆದಾಗ ಯಾವುದೇ ಪ್ರತಿರೋಧವಿಲ್ಲದೆ ಶರಣಾಗಿದ್ದಾರೆ ಎಂದು ಮೀರತ್ ವಲಯದ ಎಡಿಜಿಪಿ ಪ್ರಶಾಂತ ಕುಮಾರ ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಶಾರ್ಪ್‌ಶೂಟರ್ ಅಮರ ಸಿಂಗ್,ಸುಂದರ ಭಾಟಿ ಗ್ಯಾಂಗ್‌ನ ಉಪನಾಯಕ ಧರ್ಮೇಂದ್ರ,ತ್ಯಾಗಿಯ ಪುತ್ರ ಅರ್ಪಿತ್,ಕುಲದೀಪ್ ಮತ್ತು ಅನುಜ್ ಬಂಧಿತ ವ್ಯಕ್ತಿಗಳಾಗಿದ್ದಾರೆ. ಈ ಪೈಕಿ ಅಮರ ಸಿಂಗ್ ಮತ್ತು ಧರ್ಮೇಂದ್ರ ಅವರು ತಮ್ಮ ತಲೆಗಳ ಮೇಲೆ ಅನುಕ್ರಮವಾಗಿ ಒಂದು ಲಕ್ಷ ಮತ್ತು 50,000 ರೂ.ಗಳ ಬಹುಮಾನಗಳನ್ನು ಹೊತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಮೇ ತಿಂಗಳಲ್ಲಿ ಪಂಜಾಬಿ ಗಾಯಕ ನವಜೋತ್ ಸಿಂಗ್ ಅವರ ಕಾರನ್ನು ಕಳ್ಳತನ ಮಾಡಲು ತಾನು ಪ್ರಯತ್ನಿಸಿದ್ದು,ಅದನ್ನು ವಿರೋಧಿಸಿದ್ದ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾಗಿ ಕುಲದೀಪ್ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ. ಅಲ್ಲದೆ ಇಂದ್ರಪುರಮ್‌ನಲ್ಲಿ ಹಾಲು ವಿತರಕನಿಂದ 13 ಲ.ರೂ.ಗಳನ್ನು ದೋಚಿದ್ದನ್ನೂ ಬಂಧಿತರು ಒಪ್ಪಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News