×
Ad

ಟೆರೇಸ್‌ನಿಂದ ಕೆಳಹಾರಿ ಗಗನಸಖಿ ಆತ್ಮಹತ್ಯೆ: ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ಕುಟುಂಬ

Update: 2018-07-16 21:15 IST

ಹೊಸದಿಲ್ಲಿ, ಜು.16: ಗಗನಸಖಿಯೊಬ್ಬರು ಮನೆಯ ಟೆರೇಸ್‌ನಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ದಿಲ್ಲಿಯ ಹೌಝ್‌ಖಾಸ್ ಎಂಬಲ್ಲಿ ನಡೆದಿದ್ದು, ಘಟನೆಯ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಲುಫ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದ 39ರ ಹರೆಯದ ಅನೀಸಿಯಾ ಬಾತ್ರಾ ಆತ್ಮಹತ್ಯೆ ಮಾಡಿಕೊಂಡವರು. 2 ವರ್ಷಗಳ ಹಿಂದೆ ಅನೀಸಿಯಾ ಹಾಗೂ ಮಾಯಾಂಕ್ ಸಿಂಘ್ವಿ ವಿವಾಹವಾಗಿತ್ತು. ಆದರೆ ಹೆಚ್ಚುವರಿ ವರದಕ್ಷಿಣೆ ತರುವಂತೆ ಅನೀಸಿಯಾಗೆ ಪತಿ ಹಾಗೂ ಪತಿಯ ಸಂಬಂಧಿಕರಿಂದ ನಿರಂತರ ಕಿರುಕುಳ ನೀಡಲಾಗುತ್ತಿತ್ತು. ಅನೀಸಿಯಾ ಸಾವಿಗೆ ಪತಿ ಹಾಗೂ ಆತನ ಸಂಬಂಧಿಕರೇ ಕಾರಣ ಎಂದು ಆರೋಪಿಸಿ ಅನೀಸಿಯಾಳ ತಂದೆ ಮೇ ಜ(ನಿವೃತ್ತ) ಆರ್.ಎಸ್.ಬಾತ್ರಾ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು ಅನೀಸಿಯಾಳ ಕುಟುಂಬದ ಸದಸ್ಯರನ್ನು ಪ್ರಶ್ನಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಅನೀಸಿಯಾ ಶುಕ್ರವಾರ ಮೊಬೈಲ್‌ನಲ್ಲಿ ಸಂದೇಶ ಕಳಿಸಿದ್ದಾಳೆ. ತಕ್ಷಣ ತಾನು ಮನೆಗೆ ಧಾವಿಸಿದಾಗ ಆಕೆ ಟೆರೇಸ್‌ನಿಂದ ಕೆಳಕ್ಕೆ ಹಾರಿದ್ದಳು. ಅವಳನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಮೃತಳಾಗಿದ್ದಾಳೆ ಎಂದು ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಮಾಯಾಂಕ್ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಅನೀಸಿಯಾ ಆತ್ಮಹತ್ಯೆಗೆ ಶರಣಾಗುವ ಕೆಲ ಕ್ಷಣದ ಮೊದಲು ತನಗೆ ಮೊಬೈಲ್ ಸಂದೇಶ ಕಳುಹಿಸಿದ್ದು, ತನ್ನನ್ನು ಪತಿ ಮನೆಯಲ್ಲಿ ಬೀಗ ಹಾಕಿ ಕೂಡಿ ಹಾಕಲಾಗಿದೆ ಎಂದು ತಿಳಿಸಿದ್ದಳು. ಪತಿಯಿಂದಾಗಿ ತನ್ನ ಜೀವನವೇ ನರಕವಾಗಿದೆ ಎಂದು ಮೊಬೈಲ್ ಸಂದೇಶ ಕಳುಹಿಸಿದ್ದಳು. ಆಕೆಯನ್ನು ಟೆರೇಸ್‌ನಿಂದ ಕೆಳಗೆ ದೂಡಿ ಹಾಕಿರುವ ಸಾಧ್ಯತೆಯಿದೆ ಎಂದು ಅನೀಸಿಯಾಳ ಸಹೋದರ ಕರಣ್ ಭಾತ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

 ವಿಪರೀತ ಮದ್ಯಪಾನ ಮಾಡುತ್ತಿದ್ದ ಮಾಯಾಂಕ್ ಹೆಚ್ಚುವರಿ ವರದಕ್ಷಿಣೆ ತರುವಂತೆ ಒತ್ತಾಯಿಸಿ ಹಲವು ಬಾರಿ ತನ್ನ ಸಹೋದರಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಅನೀಸಿಯಾ ಸಾವನ್ನಪ್ಪಿದ ಬಳಿಕ ಮಾಯಾಂಕ್‌ನ ಮನೆಯವರು ಯಾರು ಕೂಡಾ ನಮ್ಮೊಂದಿಗೆ ಮಾತನಾಡಿಲ್ಲ.ಮಾಯಾಂಕ್ ಹಾಗೂ ಆತನ ಮನೆಯವರ ವಿರುದ್ಧ ದೂರು ನೀಡಿದ್ದರೂ ಈ ಪ್ರಕರಣದಲ್ಲಿ ಪೊಲೀಸರು ಅಸಡ್ಡೆಯ ಧೋರಣೆ ತಳೆದಿದ್ದಾರೆ ಎಂದು ಕರಣ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News