ಸಂಭಾಷಣೆಗೆ ನಟರು ಹೊಣೆಗಾರರಲ್ಲ: ಹೈಕೋರ್ಟ್
ಹೊಸದಿಲ್ಲಿ, ಜು.16: ಸಿನೆಮದ ಸಂಭಾಷಣೆಗೆ ನಟರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದು ದಿಲ್ಲಿ ಹೈಕೋರ್ಟ್ ತಿಳಿಸಿದ್ದು, ‘ಸೇಕ್ರೆಡ್ ಗೇಮ್ಸ್’ ವೆಬ್ ಸಿರೀಸ್ ನಟರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದ ಅರ್ಜಿಯನ್ನು ತಳ್ಳಿಹಾಕಿದೆ. ಈ ಧಾರಾವಾಹಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೆ ಅವಮಾನ ಮಾಡುವಂತಹ ಕೆಲವು ದೃಶ್ಯಗಳಿವೆ ಎಂದು ಕೋಲ್ಕತಾ ಹಾಗೂ ಮುಂಬೈಯ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದರು.
ಸಿರೀಸ್ನ ಎಲ್ಲಾ ಕಂತುಗಳೂ ಈ ಹಿಂದೆ ಪ್ರಸಾರವಾಗಿದ್ದು ಈಗ ಹೊಸದೇನನ್ನೂ ಹೇಳುತ್ತಿಲ್ಲ. ಆದ್ದರಿಂದ ‘ಸೇಕ್ರೆಡ್ ಗೇಮ್ಸ್’ ಧಾರಾವಾಹಿಯ ನಟರನ್ನು ತಪ್ಪಿತಸ್ತರು ಎನ್ನಲಾಗದು ಎಂದು ನ್ಯಾಯಾಲಯ ಸೋಮವಾರ ತಿಳಿಸಿ ಮುಂದಿನ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿದೆ. ಸೇಕ್ರೆಡ್ ಗೇಮ್ಸ್’ ವೆಬ್ ಸಿರೀಸ್ನಲ್ಲಿ ಎರಡು ದೃಶ್ಯಗಳ ಕುರಿತು ಉಲ್ಲೇಖಿಸಲಾಗಿದೆ. ಒಂದರಲ್ಲಿ ನವಾಝುದ್ದೀನ್ ಸಿದ್ಧಿಕಿಯವರ ಪಾತ್ರವು ಮಾಜಿ ಪ್ರಧಾನಿಯನ್ನು ವರ್ಣಿಸಲು ಪುಕ್ಕಲ ವ್ಯಕ್ತಿಯನ್ನು ಬಳಸಿದರೆ, ಇನ್ನೊಂದರಲ್ಲಿ ಬೋಫೋರ್ಸ್ ಮತ್ತು ಶಾ ಬಾನೊ ಪ್ರಕರಣವನ್ನು ಪ್ರಸ್ತಾವಿಸಲಾಗಿದೆ. ದೇಶದ ಐತಿಹಾಸಿಕ ಘಟನೆಗಳಾದ ಬೋಫೋರ್ಸ್ ಪ್ರಕರಣ, ಶಾ ಬಾನೊ ಪ್ರಕರಣ, ಬಾಬ್ರಿ ಮಸೀದಿ ಪ್ರಕರಣ ಹಾಗೂ ಕೋಮು ಗಲಭೆಯ ವಿಷಯಗಳನ್ನು ಅಸಮರ್ಪಕವಾಗಿ ಬಿಂಬಿಸಲಾಗಿದೆ. ಈ ಮೊದಲು ತಿಳಿಸಿದ ಎರಡು ದೃಶ್ಯಗಳನ್ನು ಹಾಗೂ ಮಾಜಿ ಪ್ರಧಾನಿಯ ಕುರಿತ ಅವಹೇಳನಾತ್ಮಕ ಹೇಳಿಕೆಯನ್ನು ಧಾರಾವಾಹಿಯಿಂದ ತೆಗೆದುಹಾಕಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಈ ಮಧ್ಯೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, “ನನ್ನ ತಂದೆ ದೇಶ ಸೇವೆಗಾಗಿ ಬದುಕಿ ದೇಶ ಸೇವೆಗಾಗಿಯೇ ಮೃತರಾಗಿದ್ದಾರೆ. ಕಲ್ಪನೆಯ ವೆಬ್ ಧಾರಾವಾಹಿಯ ಪಾತ್ರವು ಈ ಸತ್ಯವನ್ನು ಬದಲಿಸಲು ಎಂದಿಗೂ ಸಾಧ್ಯವಿಲ್ಲ’’ ಎಂದು ತಿಳಿಸಿದ್ದಾರೆ. ಜೊತೆಗೆ ಬಿಜೆಪಿಯನ್ನು ಟೀಕಿಸಿರುವ ರಾಹುಲ್, ‘ಆರೆಸ್ಸೆಸ್ ಮತ್ತು ಬಿಜೆಪಿಯವರು ಅಭಿವ್ಯಕ್ತಿ ಸ್ವಾತಂತ್ರವನ್ನು ನಿಯಂತ್ರಿಸಲು ಬಯಸುತ್ತಾರೆ. ಆದರೆ ಈ ಸ್ವಾತಂತ್ರವು ಮೂಲಭೂತ ಪ್ರಜಾಪ್ರಭುತ್ವದ ಹಕ್ಕಾಗಿದೆ ಎಂಬುದು ತನ್ನ ಭಾವನೆಯಾಗಿದೆ ಎಂದಿದ್ದಾರೆ.