ಮುಸ್ಲಿಮರ ಬಗ್ಗೆ ಸಹಾನುಭೂತಿ ಮೂಡಿಸುವುದು 'ಮುಲ್ಕ್' ಚಿತ್ರದ ಉದ್ದೇಶ ಎಂದ ಟ್ರೋಲ್ ಗಳಿಗೆ ಅನುಭವ್ ಸಿನ್ಹಾ ತಿರುಗೇಟು

Update: 2018-07-16 16:30 GMT

ಹೊಸದಿಲ್ಲಿ, ಜು.16: ತನ್ನ ಮುಂದಿನ ಚಿತ್ರ 'ಮುಲ್ಕ್' ಮೂಲಕ ಮುಸ್ಲಿಮರಿಗೆ ಬೆಂಬಲ ಹಾಗು ಅವರ ಬಗ್ಗೆ ಸಹಾನುಭೂತಿ ಮೂಡಿಸಲು ಯತ್ನಿಸಲಾಗುತ್ತಿದೆ ಎನ್ನುವ ಆರೋಪಗಳಿಗೆ ನಿರ್ದೇಶಕ ಅನುಭವ್ ಸಿನ್ಹಾ ತಿರುಗೇಟು ನೀಡಿದ್ದಾರೆ.

"ಭೂಗತಪಾತಕಿ ದಾವೂದ್ ಇಬ್ರಾಹೀಂ, ಕಾಂಗ್ರೆಸ್ ಅಥವಾ ಆರೆಸ್ಸೆಸ್ ಈ ಚಿತ್ರಕ್ಕೆ ಬಂಡವಾಳ ಹೂಡಿಲ್ಲ. ಈ ಚಿತ್ರ ಹಿಂದೂ ಮುಸ್ಲಿಮರ ಕುರಿತಾಗಿಯೂ ಅಲ್ಲ" ಎಂದವರು ಟ್ವೀಟ್ ಮಾಡಿದ್ದಾರೆ. ಚಿತ್ರದ ವಿರುದ್ಧ ವ್ಯಕ್ತವಾಗುತ್ತಿರುವ ನಕಾರಾತ್ಮಕ ಕಮೆಂಟ್ ಗಳ ಬಗ್ಗೆ, ದ್ವೇಷಕಾರುವ ಟ್ರೋಲ್ ಗಳ ಬಗ್ಗೆ ಅವರು ಟ್ವಿಟರ್ ಪತ್ರವೊಂದನ್ನು ಬರೆದಿದ್ದು, ಆ ಪತ್ರದ ಸಾರಾಂಶ ಈ ಕೆಳಗಿದೆ.

"ಪ್ರೀತಿಯ ಟ್ರಾಲ್‌ಗಳೇ, ನಮ್ಮ ದೇಶ ಹೆಚ್ಚು ಮತ್ತು ಉತ್ತಮ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಬೇಕಿತ್ತೆಂದು ನನಗನಿಸುತ್ತದೆ. ಸರಕಾರ ಉತ್ತಮ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿದ್ದರೆ ಚೆನ್ನಾಗಿರುತ್ತಿತ್ತು. ನೀವು ಒಂದು ದೊಡ್ಡ ಭಾರತೀಯ ಕಂಪೆನಿಯ ಸಿಇಒ ಅಥವಾ ದೊಡ್ಡ ಲೇಖಕ ಅಥವಾ ಸಂಗೀತಗಾರ ಅಥವಾ ನೀವು ಏನಾಗಬೇಕೆಂದು ಬಯಸಿದ್ದೀರೋ ಅದ್ಯಾವುದಾದರೂ ಆಗಬೇಕಿತ್ತು ಎಂದು ನಾನು ಆಶಿಸುತ್ತೇನೆ. ನೀವು ನಿಜವಾಗಿಯೂ ನಮ್ಮ ದೇಶವನ್ನು ಪ್ರೀತಿಸುತ್ತಿರಬೇಕಿತ್ತು ಮತ್ತು ಸೇವೆ ಮಾಡುತ್ತಿರಬೇಕಿತ್ತು ಎಂದು ನಾನು ಆಶಿಸುತ್ತೇನೆ. ನಿಮ್ಮ ಕನಸು ಏನೆಂಬುದು ನಿಮಗೆ ನೆನಪಾದರೂ ಇದೆಯೇ? ಅಥವಾ ಅದು ಕೂಡಾ ಕಳೆದ ನಾಲ್ಕು ವರ್ಷಗಳಿಂದ ಪ್ರತಿ ದಿನ, ಪ್ರತಿ ಗಂಟೆ ನೀವು ಬರೆಯುವ ದ್ವೇಷ ಬರಹಗಳ ರಾಶಿಯ ಅಡಿಯಲ್ಲಿ ಕಳೆದು ಹೋಗಿದೆಯೇ?, ನಿಮಗೊಂದು ಹೆಸರಿಲ್ಲ, ಮುಖವಿಲ್ಲ. ನೀವು ಏನು ಮಾಡುತ್ತಿದ್ದೀರೆಂದು ನಿಮ್ಮ ಮನೆಯವರು ಇತರರಿಗೆ ಹೇಳುವ ಹಾಗಿಲ್ಲ. ನಿಮ್ಮ ಹೆತ್ತವರು ನಿಮ್ಮ ಬಗ್ಗೆ ಹೆಮ್ಮೆ ಹೊಂದಿಲ್ಲ, ನಿಮ್ಮ ಸಹೋದರಿ, ನಿಮ್ಮ ಸಹೋದರರಿಗೂ ಕೂಡಾ. ಅದಕ್ಕಿಂತಲೂ ಕೆಟ್ಟದ್ದೆಂದರೆ ನಿಮಗೆ ಒಂದು ಭವಿಷ್ಯ ಎಂಬುದೇ ಇಲ್ಲ. ನಿಮ್ಮನ್ನು ಒಂದು ದಿನ ಹೊರಗೆಸೆಯಲಾಗುವುದು. ಅದಕ್ಕಾಗಿ ನಿಮಗೆ ಸಿಗುವುದಾದರೂ ಏನು? 3,000 ರೂ.???, 5,000ರೂ.? ನಾನು ನಿಮಗೆ ಇನ್ನೊಂದು ವಿಷಯ ಹೇಳಲೇ..

ನೀವು ಟ್ರಾಲ್ ಮಾಡುವ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಗಳಿಸಿಕೊಂಡಿದ್ದಾರೆ. ಅವರಿಗೊಂದು ಜೀವನ ಎಂಬುದಿದೆ. ಮತ್ತೊಂದು ವಿಷಯ ನಿಮಗೆ ತಿಳಿದಿದೆಯೇ? ಅವರಿಗೊಂದು ಧ್ವನಿಯಿದೆ ಮತ್ತು ಆ ಧ್ವನಿ ನಿಮ್ಮ ನಾಯಕರಿಗೆ ಅಪಥ್ಯವಾಗಿದೆ. ನೀವು ಕಂಬಕ್ಕೆ ಕಟ್ಟಿದ ಒಂದು ಧ್ವನಿವರ್ಧಕದಂತೆ. ಮಳೆಯಾಗಲೀ, ಬಿಸಿಲಾಗಲೀ ಯಾವುದೇ ಅದರಲ್ಲಿ ಬದಲಾವಣೆಯಾಗುವುದಿಲ್ಲ. ಏನೂ ಇಲ್ಲ!!! ಅವರ ಪರವಾಗಿ ನೀವು ದ್ವೇಷ ಕಾರುತ್ತಲೇ ಇರುತ್ತೀರಿ. ವೈಯಕ್ತಿಕವಾಗಿ ನನಗೆ ನಿಮ್ಮ ಮೇಲೆ ದಯೆ ಮೂಡುತ್ತದೆ. ನೀವು ಟ್ರಾಲ್ ಮಾಡುವ ಜನರಿಗೆ ಒಂದು ಭವಿಷ್ಯವಿದೆ, ಜೀವನವಿದೆ. ಅವರು ತಮಗೆ ಸಮಯ ಸಿಕ್ಕಾಗ ಇಲ್ಲಿಗೆ ಬರುತ್ತಾರೆ ಮತ್ತು ನಂತರ ತಮ್ಮ ಜೀವನಕ್ಕೆ ಮರಳುತ್ತಾರೆ. ಆದರೆ ನೀವು ನಿಮ್ಮ ನಾಯಕರು ಸೂಚಿಸಿದಂತೆ ಮುಂದಿನ ವ್ಯಕ್ತಿಯನ್ನು ಗುರಿ ಮಾಡುತ್ತೀರಿ, ಇಲ್ಲೇ ಇರುತ್ತೀರಿ. ಇದನ್ನು ನೀವು ಪ್ರತಿದಿನ ಮಾಡುತ್ತಿರುತ್ತೀರಿ. ನನ್ನ ಗೆಳೆಯರೇ, ನೀವು ಮಾಡುವ ಈ ಕೆಲಸ ಜಗತ್ತಿನ ಯಾವುದೇ ಭಾಗದಲ್ಲೂ ಒಂದು ವೃತ್ತಿಯಾಗಿಲ್ಲ. 'ಮುಲ್ಕ್' ಸಿನೆಮಾಕ್ಕೆ ದಾವೂದ್ ಇಬ್ರಾಹಿಂ ಹೂಡಿಲ್ಲ. ಬೇಕಾದರೆ ಆತನನ್ನೇ ನೀವು ಕೇಳಿ. ಇನ್ನು ಕಾಂಗ್ರೆಸ್ ಕೂಡಾ ಇಲ್ಲ, ರಾಹುಲ್ ಗಾಂಧಿಯನ್ನು ಬೇಕಾದರೆ ಕೇಳಿ. ಅದನ್ನು ನಿರ್ಮಾಣ ಮಾಡಿರುವುದು ಆರೆಸ್ಸೆಸ್ ಕೂಡಾ ಅಲ್ಲ, ನೀವು ಮೋಹನ್ ಭಾಗವತ್ ಅವರಲ್ಲಿ ವಿಚಾರಿಸಬಹುದು. ಈ ಸಿನೆಮಾವನ್ನು ನಿರ್ಮಿಸಿರುವವರು ದೀಪಕ್ ಮುಕುಟ್ ಮತ್ತು ಅವರ ತಂದೆ, ಹಿರಿಯ ಉದ್ಯಮಿ ಕಮಲ್ ಮುಕುಟ್. ನನ್ನ ಪ್ರತಿಯೊಂದು ಪೋಸ್ಟ್ ಕೂಡಾ 'ಮುಲ್ಕ್‌'ಗೆ ಸಂಬಂಧಿಸಿದ್ದಲ್ಲ. ನಾವು ಈ ಸಿನೆಮಾದ ಪ್ರಚಾರಕ್ಕಾಗಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದ್ದೇವೆ ಮತ್ತು ಅದಕ್ಕಿಂತಲೂ ಹೆಚ್ಚು ಹಣವನ್ನು ಚಿತ್ರದ ನಿರ್ಮಾಣಕ್ಕೆ ವೆಚ್ಚ ಮಾಡಿದ್ದೇವೆ. ಈ ಟ್ವೀಟ್‌ಗಳು ನಮ್ಮ ಪ್ರಚಾರ ಅಭಿಯಾನದ ಅತ್ಯಂತ ಸಣ್ಣ ಭಾಗವಷ್ಟೇ ಮತ್ತು ನಾನು ಈ ಮೊದಲು ತಿಳಿಸಿದಂತೆ ನಮಗೂ ಒಂದು ಜೀವನವಿದೆ......ಮತ್ತು ಒಂದು ಧ್ವನಿಯಿದೆ, ಹಾಗಾಗಿ ಕೆಲಸದ ಹೊರಗೆಯೂ ನಾವು ಮಾತನಾಡುತ್ತೇವೆ. ನಾವು ನಿಮ್ಮ ಪೋಸ್ಟ್‌ಗಳನ್ನು ಓದುತ್ತೇವೆ ಮತ್ತು ನಗುತ್ತೇವೆ. ನಿಮ್ಮ ಬಗ್ಗೆ ನಮಗೆ ದುಃಖವಾಗುತ್ತದೆ. ಕೆಲವೊಂದು ಬಾರಿ ನೀವು ನಮಗೆ ನೋವುಂಟು ಮಾಡುತ್ತೀರಿ. ಆದರೆ ಅದು ನಿಮ್ಮ ಧ್ವನಿ ಅಲ್ಲ ಎಂದು ನಮಗೆ ತಿಳಿದಿರುವ ಕಾರಣ ಹೆಚ್ಚಾಗಿ ನಮಗೆ ದುಃಖವಾಗುವುದಿಲ್ಲ. ಇನ್ನೂ ನಿಖರವಾಗಿ ಹೇಳುವುದಾದರೆ ಹಾಗೆ ಮಾಡುತ್ತಿರುವವರು ನೀವಲ್ಲ. ನಿಮ್ಮ ಬೆರಳುಗಳು ಮತ್ತು ಕಣ್ಣುಗಳನ್ನು ನಿಮ್ಮ ನಾಯಕರು ಅವರಿಗೆ ಬೇಕಾದಂತೆ ಬಳಸುತ್ತಿದ್ದಾರೆ. ಅದು ನಿಮ್ಮ ನಾಯಕರು ನೀಡುವ ಸೂಚನೆಗಳು ಮತ್ತು ಅವರಿಗೆ ನಾವು ಹೆದರುವುದಿಲ್ಲ. ಇದೇ ವೇಳೆ, ಈ ಪತ್ರಕ್ಕೆ ಪ್ರತಿಕ್ರಿಯೆ ನೀಡುವಂತೆ ನಿಮಗೆ ಸೂಚನೆಗಳು ಬರಬಹುದು. ಹಾಗಾಗಿ ನಾನಿಲ್ಲಿ ನನ್ನ ಸಿನೆಮಾದ ಬಗ್ಗೆ ಒಂದಷ್ಟು ಮಾತನಾಡುತ್ತೇನೆ. 'ಮುಲ್ಕ್' ಒಂದು ಉತ್ತಮ ಸಿನೆಮಾ. ಅದರಲ್ಲಿ ಏನನ್ನು ತೋರಿಸಲಾಗಿದೆ ಎಂದು ನೀವು ಯೋಚಿಸುತ್ತೀರೋ ಅದ್ಯಾವುದೂ ಅದರಲ್ಲಿ ಇಲ್ಲ. ಅದು ನಿಮ್ಮ ನಾಯಕರ ಕುರಿತಾಗಿ ಅಲ್ಲ. ಹಿಂದೂಗಳ ಅಥವಾ ಮುಸ್ಲಿಮರ ಕುರಿತಾಗಿ ಅಲ್ಲ. ಅದು ನಿಮ್ಮ ಕುರಿತಾದದ್ದು, ನನ್ನ ಕುರಿತಾದದ್ದು ಮತ್ತು ಮುಖ್ಯವಾಗಿ ನಮ್ಮ ಕುರಿತಾದದ್ದು. ನಿಮ್ಮ ಕೆಟ್ಟ ಅನಿಸಿಕೆಗಳನ್ನು ಖಂಡಿತವಾಗಿಯೂ ಬರೆಯಿರಿ, ಆದರೆ ಸಿನೆಮಾ ಮಾತ್ರ ವೀಕ್ಷಿಸಿ. ಅದನ್ನು ನೀವು ಇಷ್ಟಪಡುತ್ತೀರಿ, ಯಾಕೆಂದರೆ ನಿಮ್ಮೊಳಗೆ ಈಗಲೂ ಸ್ವಲ್ಪ ನೀವಿದ್ದೀರಿ ಎಂದು ನನಗೆ ತಿಳಿದಿದೆ. ನಿಮಗೊಂದು ಉತ್ತಮ ಭವಿಷ್ಯ ಮತ್ತು ಉತ್ತಮ ಜೀವನ ಸಿಗಲೆಂದು ನಾನು ಈಗಲೂ ಹಾರೈಸುತ್ತೇನೆ. ನಿಮ್ಮ ನಾಯಕರಿಗೆ ಅದೆಲ್ಲ ಈಗಲೇ ಇದೆ. ಶುಭಕಾಮನೆಗಳು"

ಅನುಭವ್ ಸಿನ್ಹಾ

ಸೂಚನೆ: ನನ್ನ ಸಾಮಾಜಿಕ ಜಾಲತಾಣ ವಿಳಾಸ ನಿಮ್ಮ ಬಳಿಯಿದೆ ಎಂದು ನಾನು ತಿಳಿಯುತ್ತೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News