ಅರ್ಧಚಂದ್ರ, ನಕ್ಷತ್ರದ ಹಸಿರು ಬಾವುಟ ನಿಷೇಧಕ್ಕೆ ಮನವಿ : ಕೇಂದ್ರದ ನಿಲುವು ಕೋರಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಜು. 16: ಇಸ್ಲಾಂನದ್ದಲ್ಲದ ಹಾಗೂ ಪಾಕಿಸ್ತಾನದ ಧ್ವಜವನ್ನು ಹೋಲುವ ಅರ್ಧಚಂದ್ರ ಹಾಗೂ ನಕ್ಷತ್ರ ಇರುವ ಹಸಿರು ಬಾವುಟವನ್ನು ನಿಷೇಧಿಸುವಂತೆ ಕೋರಿ ಮುಸ್ಲಿಂ ವಿದ್ವಾಂಸರು ಸಲ್ಲಿಸಿರುವ ಮನವಿಯ ಕುರಿತು ಸುಪ್ರೀ ಕೋರ್ಟ್ ಸೋಮವಾರ ನಿಲುವು ತಿಳಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.
ಈ ಪ್ರಕರಣದ ಕುರಿತು ಕೇಂದ್ರದ ನಿಲುವು ತಿಳಿಸುವಂತೆ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರನ್ನು ಒಳಗೊಂಡ ಪೀಠ ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿತು ಹಾಗೂ ವಿಚಾರಣೆಯನ್ನು ಎರಡು ವಾರ ಮುಂದೂಡಿತು. ‘‘ಸರಕಾರದ ನಿಲುವು ಏನು ಎಂಬ ಬಗ್ಗೆ ವಿವರ ಪಡೆಯಿರಿ. ಕೆಲವೊಮ್ಮೆ ಇದರ ಬಗ್ಗೆ ನಿಲುವು ವ್ಯಕ್ತಪಡಿಸುವುದು ಸರಕಾರಕ್ಕೆ ಕಷ್ಟವಾಗಬಹುದು.’’ ಎಂದು ಪೀಠ ಹೇಳಿದೆ. ಕೇಂದ್ರ ಸರಕಾರದಿಂದ ಸೂಚನೆ ಪಡೆಯಲು ಮೆಹ್ತಾ ಅವರಿಗೆ ದೂರಿನ ಪ್ರತಿಯನ್ನು ನೀಡುವಂತೆ ದೂರುದಾರನಿಗೆ ಸುಪ್ರೀಂ ಕೋರ್ಟ್ ಸೂಚಿಸಿತು. ಉತ್ತರಪ್ರದೇಶ ಶಿಯಾ ಸೆಂಟ್ರಲ್ ಬೋರ್ಡ್ ಆಫ್ ವಕ್ಫ್ ಅಧ್ಯಕ್ಷ ಸಯ್ಯದ್ ವಸೀಮ್ ರಿಝ್ವಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ತಾನು ಮುಂಬೈ, ಹೈದರಾಬಾದ್, ಕರ್ನಾಟಕ ಹಾಗೂ ದೇಶದ ಇತರ ಭಾಗಗಳಿಗೆ ಭೇಟಿ ನೀಡಿದ ಸಂದರ್ಭ ಹಲವು ಕಟ್ಟಡ ಹಾಗೂ ಧಾರ್ಮಿಕ ಕೇಂದ್ರಗಳ ಮೇಲೆ ಇಂತಹ ಬಾವುಟಗಳನ್ನು ಗಮನಿಸಿದ್ದೇನೆ. ಇದು ಹಿಂದೂ ಮುಸ್ಲಿಂ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದು ರಿಝ್ವಿ ಪರ ಹಿರಿಯ ವಕೀಲ ಎಸ್.ಪಿ. ಸಿಂಗ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.