×
Ad

ಹಾರರ್ ಚಿತ್ರಗಳನ್ನೂ ಮೀರಿಸುವಂತೆ ಎದೆನಡುಗಿಸುತ್ತದೆ ಪ್ರಿಯಾಳ 'ಭಯಾನಕ' ಸಂದರ್ಶನ!

Update: 2018-07-16 22:51 IST

ಹೊಸದಿಲ್ಲಿ, ಜು.16: ವ್ಯಕ್ತಿಯೊಬ್ಬನನ್ನು ಕೊಲೆಗೈದು ಆತನ ಮೃತದೇಹವನ್ನು ಜೈಪುರ-ದಿಲ್ಲಿ ಹೆದ್ದಾರಿಯ ಬದಿ ಸೂಟ್ ಕೇಸ್ ನಲ್ಲಿ ಇರಿಸಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೇ ತಿಂಗಳಲ್ಲಿ ಇಬ್ಬರು ಯುವಕರೊಂದಿಗೆ 27 ವರ್ಷದ ಯುವತಿಯೊಬ್ಬಳನ್ನು ಬಂಧಿಸಿದ್ದರು.

ಡೇಟಿಂಗ್ ಆ್ಯಪ್ 'ಟಿಂಡರ್' ಮೂಲಕ ಮೃತ ಯುವಕ ದುಷ್ಯಂತ್ ಶರ್ಮಾನನ್ನು ಈ ಗುಂಪು ತಮ್ಮ ಬಲೆಗೆ ಬೀಳಿಸಿತ್ತು ಎಂದು ಹೇಳಲಾಗಿತ್ತು. ತಾನೊಬ್ಬ ಕೋಟ್ಯಾಧಿಪತಿ ಎಂದು ದುಷ್ಯಂತ್ ಈ ಯುವತಿಯೊಂದಿಗೆ ಸುಳ್ಳು ಹೇಳಿದ್ದ. ತನ್ನ ಸಹಚರರಾದ ದಿಕ್ಷಾಂತ್ ಕಮ್ರಾ ಹಾಗು ಲಕ್ಷ್ಯ ವಾಲಿಯಾ ನೆರವಿನಿಂದ ಯುವತಿ ಪ್ರಿಯಾ ದುಷ್ಯಂತ್ ನನ್ನು ಅಪಹರಿಸಿದ್ದಳು. ಆದರೆ ದುಷ್ಯಂತ್ ತಂದೆಯೊಂದಿಗೆ ಹಣಕ್ಕೆ ಬೇಡಿಕೆಯಿಟ್ಟಾಗಲಷ್ಟೇ ದುಷ್ಯಂತ್ ಕೋಟ್ಯಾಧಿಪತಿಯಲ್ಲ ಎನ್ನುವುದು ಈ ತಂಡಕ್ಕೆ ಗೊತ್ತಾಗಿತ್ತು. ಪುತ್ರನನ್ನು ಈಗಾಗಲೇ ಕೊಲೆಗೈಯಲಾಗಿದೆ ಎಂದು ಹೇಳದೆ ಈ ಮೂವರ ತಂಡ ದುಷ್ಯಂತ್ ತಂದೆಯಿಂದ 3 ಲಕ್ಷ ರೂ.ಗಳನ್ನು ವಸೂಲಿ ಮಾಡಿತ್ತು. ದಿಲ್ಲಿ ಜೈಪುರ್ ಹೆದ್ದಾರಿ ಬದಿಯಲ್ಲಿ ದುಷ್ಯಂತ್ ಮೃತದೇಹ ಸೂಟ್ ಕೇಸ್ ಒಂದರಲ್ಲಿ ಪೊಲೀಸರಿಗೆ ಲಭಿಸಿತ್ತು.

ದುಷ್ಯಂತ್ ಹಾಗು ಅವರ ತಂದೆಗೆ ನ್ಯಾಯ ಕೊಡಿಸುವ ಸಲುವಾಗಿ ಈ ಪ್ರಕರಣಕ್ಕೆ ಹೆಚ್ಚು ಗಮನ ನೀಡುತ್ತಿರುವ ಪತ್ರಕರ್ತೆ ದೀಪಿಕಾ ನಾರಾಯಣ್ ಭಾರಧ್ವಾಜ್ , ಈ ಪ್ರಕರಣ ಸೂತ್ರಧಾರಿ ಪ್ರಿಯಾಳೊಂದಿಗೆ ಮಾತನಾಡಿದ್ದು, ಆ ಸಂದರ್ಶನದಲ್ಲಿ ಬೆಚ್ಚಿಬೀಳಿಸುವಂತಹ ಕ್ರೌರ್ಯತೆ ಬೆಳಕಿಗೆ ಬಂದಿದೆ.

ದುಷ್ಯಂತ್ ನನ್ನು ಅಪಹರಿಸಿ ಕೊಲೆಗೈಯುವ ಮೊದಲು ಸಾವಿರಾರು ಪುರುಷರನ್ನು ಬ್ಲ್ಯಾಕ್ ಮೇಲ್ ಮಾಡಿರುವ ವಿಚಾರವನ್ನು ಸಂದರ್ಶನದಲ್ಲಿ ಪ್ರಿಯಾ ಅತ್ಯಂತ ಸಹಜವಾಗಿ ವಿವರಿಸುತ್ತಾಳೆ. ವೇಶ್ಯಾವಾಟಿಕೆ ಆರೋಪ, ಎಟಿಎಂ ದರೋಡೆ, ಸುಲಿಗೆ, ಸುಳ್ಳು ಅತ್ಯಾಚಾರ ಬೆದರಿಕೆಗಳು, ಹನಿಟ್ರ್ಯಾಪ್ ಹೀಗೆ ಹಲವಾರು ಆರೋಪಗಳು ಪ್ರಿಯಾಳ ಮೇಲಿದೆ. ದುಷ್ಯಂತ್ ನನ್ನು ಕೊಲೆಗೈಯುವ ಮೊದಲು ಆಕೆಯ ಹಲವು ಬಾರಿ ಬಂಧನಕ್ಕೊಳಗಾಗಿದ್ದರೂ, ಜಾಮೀನು ಲಭಿಸಿತ್ತು.  ಏಳೆಂಟು ವರ್ಷಗಳಿಂದಲೇ ತಾನು ಯುವತಿಯರನ್ನು ಸರಬರಾಜು ಮಾಡುವ ಏಜೆಂಟ್ ಎಂದು ಹಲವು ಪುರುಷರನ್ನು ಯಾಮಾರಿಸಿದ್ದಾಗಿ ಆಕೆಯೇ ಹೇಳಿಕೊಳ್ಳುತ್ತಾಳೆ. "ನಾನು ಅವರ ಬಳಿ ಹೋಗೆ ಹಣ ಪಡೆಯುತ್ತಿದ್ದೆ. ನಂತರ ಡ್ರೈವರ್ ಗೆ ಹಣ ನೀಡಬೇಕಾಗಿದೆ ಎಂದು ಹೇಳಿ ಅಲ್ಲಿಂದ ಪರಾರಿಯಾಗುತ್ತಿದ್ದೆ" ಎಂದು ಪ್ರಿಯಾ ಹೇಳುತ್ತಾಳೆ.

ಯುವತಿಯರಿಗಾಗಿ ಎದುರು ನೋಡುತ್ತಿರುವ ಪುರುಷರಿಗೆ ಮೋಸ ಮಾಡುವುದನ್ನು ಆಕೆ 'ಸಮಾಜ ಸೇವೆ' ಎಂದು ಹೇಳುತ್ತಾಳೆ!. ಅಷ್ಟೇ ಅಲ್ಲದೆ ಈ ಕೊಲೆಗಾಗಿ ತಾನು ಜೈಲು ಸೇರಿದ್ದರಿಂದ ತನ್ನ ಸೇವೆಗೆ ತೊಡಕಾಗಬಹುದು ಎಂದೂ ಆಕೆ ಹೇಳುತ್ತಾಳೆ. "ಮೊದಲು ದಿಕ್ಷಾಂತ್ ಆತನ ಕುತ್ತಿಗೆ ಹಿಸುಕಿದ. ಆದರೆ ಆತ ಬದುಕುಳಿದ. ನಂತರ ಲಕ್ಷ್ಯ ದಿಂಬನ್ನು ಒತ್ತಿಹಿಡಿದ. ಆಗಲೂ ಆತ ಬದುಕುಳಿದ. ಕೊನೆಗ ಲಕ್ಷ್ಯ ದುಷ್ಯಂತ್ ಗೆ ಇರಿಯಲು ಚಾಕು ಕೇಳಿದ" ಎನ್ನುತ್ತಾಳೆ ಪ್ರಿಯಾ. ಆದರೆ ದುಷ್ಯಂತ್ ಗೆ ಮೊದಲು ಇರಿದದ್ದು ಪ್ರಿಯಾ ಎಂದು ಲಕ್ಷ್ಯ ಆರೋಪಿಸುತ್ತಾನೆ.

ಈ 'ಭಯಾನಕ' ಸಂದರ್ಶನದ ವಿಡಿಯೋ ಈ ಕೆಳಗಿದೆ.

ಕೃಪೆ: www.timesnownews.com

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News