ಕ್ರೌರ್ಯ ಯಾಕೆ ಕೊನೆಗಾಣುತ್ತಿಲ್ಲ?

Update: 2018-07-16 18:31 GMT

ಮಾನ್ಯರೇ,

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ರಾಜ್‌ಪುರ ಗ್ರಾಮದಲ್ಲಿ 35 ವರ್ಷದ ವಿವಾಹಿತೆಯೊಬ್ಬಳನ್ನು ಐವರು ಪಾತಕಿಗಳು ಸಾಮೂಹಿಕ ಅತ್ಯಾಚಾರ ನಡೆಸಿ, ಜೀವಂತ ಸುಟ್ಟುಹಾಕಿದ್ದಾರೆ. ಇದೇ ವೇಳೆೆ ಹೊಸ ದಿಲ್ಲಿಯ ಸಾಕೇತ ಕೋರ್ಟ್‌ನ ಆವರಣದಲ್ಲಿ ನ್ಯಾಯವಾದಿಯೊಬ್ಬಳ ಮೇಲೆ ಆಕೆಯ ಸೀನಿಯರ್ ವಕೀಲನೊಬ್ಬ ಅತ್ಯಾಚಾರ ಮಾಡಿರುವ ಪ್ರಕರಣ ವರದಿಯಾಗಿದೆ. ನ್ಯಾಯ ಮಂದಿರವೆಂದೇ ಹೆಸರಾಗಿರುವ ಕೋರ್ಟ್ ಆವರಣದಲ್ಲಿ ಕೂಡ ಮಹಿಳೆ ಸುರಕ್ಷಿತಳಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಹಳ್ಳಿಯಿಂದ ದಿಲ್ಲಿಯವೆರಗೂ ಹರಡಿರುವ ಲೈಂಗಿಕ ದೌರ್ಜನ್ಯದ ವಿಶ್ವ ರೂಪವನ್ನು ಇವೆರಡೂ ಪ್ರಕರಣಗಳು ಬಿಚ್ಚಿಟ್ಟಿದೆ. ಇತ್ತೀಚೆಗೆ ದಿಲ್ಲಿಯಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿ ಕಠಿಣ ದಂಡನೆಯ ತೀರ್ಪು ನೀಡಿದೆ ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ, ಈ ಎರಡೂ ಘಟನೆಗಳು ನಡೆದಿವೆ.
ಶಿಕ್ಷೆಯ ಪ್ರಮಾಣ ಹೆಚ್ಚಿದಂತೆ ಅಪರಾಧದ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಮಾತು ಅತ್ಯಾಚಾರದ ವಿಚಾರದಲ್ಲಿ ನಿಜವಾಗಿಲ್ಲ. ಗಲ್ಲು ಶಿಕ್ಷೆಯ ಭಯವೂ ಅತ್ಯಾಚಾರಿಗಳ ಮೇಲೆ ಪರಿಣಾಮ ಬೀರಲಿಲ್ಲ. ಬದಲಾಗಿ ಅತ್ಯಾಚಾರದ ಬಲಿಪಶುವನ್ನೇ ಸಾಯಿಸಿ ಸಾಕ್ಷಿನಾಶ ಮಾಡಿದರೆ ಬಚಾವಾಗಬಹುದು ಎಂಬ ತದ್ವಿರುದ್ಧ ಪರಿಣಾಮ ಹುಟ್ಟಿದಂತಿದೆ.

ಆದ್ದರಿಂದ ಸರಕಾರಗಳು ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಹೆಣ್ಣು ಮಕ್ಕಳು ಸುರಕ್ಷಿತವಾಗಿ ಸಾರ್ವಜನಿಕ ಸ್ಥಳ, ಕಚೆೇರಿಗಳಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ಹೆಣ್ಣು ಮಕ್ಕಳಿಗೆ ಲೈಂಗಿಕ ಆತ್ಮ ರಕ್ಷಣಾ ವಿಧಾನ ಹೇಳಿಕೊಡಬೇಕು. ಅಲ್ಲದೆ ಪೊಲೀಸ್ ವ್ಯವಸ್ಥೆಯ ಶೀಘ್ರ ಸ್ಪಂದನೆ ದೊರಕುವಂತಿರಬೇಕು. 

Similar News