ಈ ಹುಡುಗ ಒಂದೇ ವಾರದಲ್ಲಿ ಅಪ್ಪನಾದ, ಅಜ್ಜನೂ ಆದ !

Update: 2018-07-17 11:51 GMT

ಈ ಜಗತ್ತಿನಲ್ಲಿ ಮಾನವೀಯತೆ ಇನ್ನೂ ಇದೆ ಎನ್ನುವುದಕ್ಕೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ 23ರ ಹರೆಯದ ಹುಡುಗ ಟಾಮಿ ಕೊನೊಲಿಯೇ ಸಾಕ್ಷಿಯಾಗಿದ್ದಾನೆ. ಈತ ತನ್ನ ಎಳೆಯ ಸೋದರ ಸಂಬಂಧಿ ಬಾಲಕಿಯನ್ನು ದತ್ತು ತೆಗೆದುಕೊಳ್ಳುವ ಮೂಲಕ ಒಂದೇ ವಾರದಲ್ಲಿ ಅಪ್ಪನೂ ಆಗಿದ್ದಾನೆ, ಅಜ್ಜನೂ ಆಗಿಬಿಟ್ಟಿದ್ದಾನೆ !

ಅದು ಫ್ರೆಂಡ್ ರಿಕ್ವೆಸ್ಟ್‌ನಿಂದ ಆರಂಭಗೊಂಡಿತ್ತು

ಕಳೆದ ಹತ್ತು ವರ್ಷಗಳಿಂದ ತಾನು ಸಂಪರ್ಕವನ್ನು ಕಳೆದುಕೊಂಡಿದ್ದ ತನ್ನ ಸೋದರ ಸಂಬಂಧಿಯ ಫೇಸ್‌ಬುಕ್ ಫ್ರೆಂಡ್ ರಿಕ್ವೆಸ್ಟ್ ತನ್ನ ಜೀವನವನ್ನೇ ಸಂಪೂರ್ಣವಾಗಿ ಬದಲಿಸಲಿದೆ ಎಂದು ಟಾಮಿ ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ

ಟಾಮಿಯ ಸೋದರ ಸಂಬಂಧಿ ಬಾಲಕಿ ಏಂಜೆಲಾ(ಹೆಸರು ಬದಲಿಸಲಾಗಿದೆ) ಇನ್ನೂ ಹದಿನಾರರ ಹರೆಯದಲ್ಲಿದ್ದು,ಆಗಲೇ ಗರ್ಭಿಣಿಯಾಗಿದ್ದಳು.

ಆಕೆಯ ಬದುಕೇ ಅಧ್ವಾನವಾಗಿತ್ತು

ಎಂಜೆಲಾ ಟಾಮಿಯನ್ನು ಸಂಪರ್ಕಿಸಿದಾಗ ಆಕೆಯ ಬದುಕು ಸಂಪೂರ್ಣ ಅಧ್ವಾನಗೊಂಡಿತ್ತು. ಆಕೆ ಅನಕ್ಷರಸ್ಥೆ ಮಾತ್ರವಲ್ಲ, ತನ್ನ ಹದಿಹರೆಯದ ಆರಂಭದ ದಿನಗಳಲ್ಲಿ ಮಾದಕ ದ್ರವ್ಯಗಳನ್ನೂ ಸೇವಿಸಿದ್ದಳು. 15 ವರ್ಷ ಪ್ರಾಯವಾಗಿದ್ದಾಗ ಮಾದಕ ದ್ರವ್ಯ ಸೇವನೆಯನ್ನು ನಿಲ್ಲಿಸಿದ್ದಳು. ಆದರೆ 16ನೇ ವಯಸ್ಸಿಗೇ ಗರ್ಭಿಣಿಯಾಗಿದ್ದಳು. ಪರಸ್ಪರ ಸಂಪರ್ಕದಿಂದ ದೂರವಾಗಿದ್ದ ಈ ಸೋದರ ಸಂಬಂಧಿಗಳು ಮತ್ತೆ ಭೇಟಿಯಾದಾಗ ಏಂಜೆಲಾಗೆ ಎಂಟನೇ ತಿಂಗಳು ನಡೆಯುತ್ತಿತ್ತು.

ಆಕೆಗೆ ಮನೆಯೂ ಇರಲಿಲ್ಲ

ಏಂಜೆಲಾ ಗರ್ಭಿಣಿಯಾಗಿದ್ದಷ್ಟೇ ಅಲ್ಲ,ಆಕೆಗೆ ಮನೆಯೂ ಇರಲಿಲ್ಲ. ಆಕೆಯ ಬಳಿ ಸೆಲ್‌ಫೋನ್ ಕೂಡ ಇರಲಿಲ್ಲ. ಆಕೆಯ ಬಳಿ ಇದ್ದ ಸೊತ್ತುಗಳನ್ನೆಲ್ಲ ಆರಾಮವಾಗಿ ಒಂದು ಬ್ಯಾಕ್‌ಪ್ಯಾಕ್‌ನಲ್ಲಿ ತುಂಬಬಹುದಾಗಿತ್ತು. ಅಲ್ಲದೆ ಆಕೆಗೆ ಮಗು ಜನಿಸಿದಾಗ ಅದನ್ನು ದತ್ತಕ ನೀಡುವ ಉದ್ದೇಶದಿಂದ ಅಧಿಕಾರಿಗಳೂ ಆಕೆಯ ಮೇಲೆ ಒಂದು ಕಣ್ಣಿರಿಸಿದ್ದರು.

ಟಾಮಿ ಆಕೆಯನ್ನು ತನ್ನ ಮನೆಗೆ ಕರೆತಂದಿದ್ದ

ಏಂಜೆಲಾಳ ಸ್ಥಿತಿಯನ್ನು ತಿಳಿದ ಟಾಮಿ ತಕ್ಷಣವೇ ಆಕೆಯಿದ್ದ ಅನಾಥರ ಆಶ್ರಯತಾಣಕ್ಕೆ ತೆರಳಿ ತನ್ನ ಮನೆಗೆ ಕರೆತಂದಿದ್ದ. ಆಕೆಯನ್ನು ತನ್ನ ಫ್ಲಾಟ್‌ಗೆ ಕರೆತರಲು ನಿರ್ಧರಿಸಿದ್ದ ಆತ ಆ ಬಗ್ಗೆ ಎರಡನೇ ಯೋಚನೆಯನ್ನೇ ಮಾಡಿರಲಿಲ್ಲ. ಅಲ್ಲದೆ ಆಕೆಯ ಗರ್ಭಾವಸ್ಥೆಯ ಅಂತಿಮ ಹಂತದಲ್ಲಿ ಆಕೆಯ ಬಗ್ಗೆ ಕಾಳಜಿಯನ್ನೂ ವಹಿಸಿದ್ದ.

ಹುಟ್ಟಲಿರುವ ಮಗುವಿನ ಅಪ್ಪ ಅಲ್ಲಿರಲಿಲ್ಲ

ಆರನೇ ವರ್ಷದಲ್ಲಿಯೇ ಶಾಲೆಯನ್ನು ತೊರೆದಿದ್ದ ಏಂಜೆಲಾಳ ಗರ್ಭಕ್ಕೆ ಕಾರಣನಾಗಿದ್ದ ಪ್ರಿಯಕರ ಜೈಲಿನಲ್ಲಿದ್ದ. ಹೀಗಾಗಿ ಆತ ಯಾವುದೇ ನೆರವು ನೀಡುವ ಸ್ಥಿತಿಯಲ್ಲಿರಲಿಲ್ಲ.

ದತ್ತಕ ಸ್ವೀಕರಿಸುವ ಬಗ್ಗೆ ದೂಸರಾ ಯೋಚನೆಯನ್ನೇ ಮಾಡಲಿಲ್ಲ

ಟಾಮಿ ಎಳವೆಯಲ್ಲಿದ್ದಾಗ ಏಂಜೆಲಾ ಆತನ ಇಷ್ಟದ ಕಸಿನ್ ಆಗಿದ್ದಳು. ಹೀಗಾಗಿ ಆಕೆಯನ್ನು ತನ್ನ ಮಗಳಾಗಿ ದತ್ತು ಸ್ವೀಕರಿಸಲು ನಿರ್ಧರಿಸಿದ್ದ ಆತ ಕಾನೂನುಪ್ರಕಾರ ಅಗತ್ಯವಾದ ಎಲ್ಲ ಕೆಲಸಗಳನ್ನು ಮುಗಿಸಿ ಅಧಿಕೃತವಾಗಿ ಆಕೆಗೆ ತಂದೆಯಾಗಿದ್ದ.

23ರ ಹರೆಯದಲ್ಲಿಯೇ ತಂದೆಯಾದ ಭಾವನಾತ್ಮಕವಾಗಿ ತೀವ್ರ ಘಾಸಿಗೊಂಡಿದ್ದ ತನ್ನ ಪುಟ್ಟ ಕಸಿನ್‌ಗೆ ಚೇತರಿಕೆಗೆ ಒಂದು ಅವಕಾಶ ಖಂಡಿತವಾಗಿಯೂ ದೊರೆಯಬೇಕೆಂದು ನಂಬಿದ್ದ ಟಾಮಿ ತಾನು ದತ್ತು ತಂದೆಯಾಗಿರುವ ಬಗ್ಗ ಕೊಂಚವೂ ತಲೆ ಕೆಡಿಸಿಕೊಂಡಿಲ್ಲ.

ವಾರದಲ್ಲೇ ಅಜ್ಜನಾದ

ಟಾಮಿ ತನ್ನನ್ನು ಮಗಳಾಗಿ ದತ್ತು ಪಡೆದುಕೊಂಡ ವಾರದೊಳಗೆ ಏಂಜೆಲಾ ಮಗುವನ್ನು ಹೆತ್ತಿದ್ದಳು ಮತ್ತು ಟಾಮಿ ತನ್ನ 23ನೇ ವಯಸ್ಸಿನಲ್ಲಿ ಅಜ್ಜನೂ ಆಗಿ ಬಿಟ್ಟಿದ್ದ. ಹೀಗೆ ಒಂದೇ ವಾರದಲ್ಲಿ ಅಪ್ಪ ಮತ್ತು ಅಜ್ಜನಾದ ವಿಶ್ವದ ಮೊದಲ ವ್ಯಕ್ತಿಯೂ ಆಗಿದ್ದಾನೆ.

ಹರಿದುಬಂದ ನೆರವು

ಟಾಮಿ ಮತ್ತು ಏಂಜೆಲಾ ಕಥೆ ಅಂತರ್ಜಾಲದಲ್ಲಿ ಹರಿದಾಡಿದಾಗ ಏಂಜೆಲಾಗೆ ಆರ್ಥಿಕ ನೆರವು ಒದಗಿಸಲು ಫೇಸ್‌ಬುಕ್ ಪೇಜ್ ಆರಂಭಗೊಂಡಿದ್ದು,ಇದರಿಂದಾಗಿ ಆಕೆಯ ಮತ್ತು ಮಗುವಿನ ಖರ್ಚುವೆಚ್ಚಗಳನ್ನು ನೋಡಿಕೊಳ್ಳಲು ಟಾಮಿಗೆ ನೆರವಾಗಿದೆ.

ಇನ್ನೂ ವಿದ್ಯಾರ್ಥಿ ಟಾಮಿ ಕ್ವೀನ್ಸ್‌ಲ್ಯಾಂಡ್‌ನ ಯುನಿವರ್ಸಿಟಿ ಆಫ್ ಸನ್‌ಶೈನ್ ಕೋಸ್ಟ್‌ನಲ್ಲಿ ಇನ್ನೂ ವ್ಯಾಸಂಗ ಮಾಡುತ್ತಿದ್ದಾನೆ. ಉತ್ತಮ ಕ್ರೀಡಾಪಟುವಾಗಿರುವ ಆತ ಓಟದ ತರಬೇತಿಯನ್ನು ಪಡೆಯುತ್ತಿದ್ದಾನೆ. ಓದಿನ ಜೊತೆಗೆ ಪಾರ್ಟ್‌ಟೈಮ್ ದುಡಿಯುತ್ತಿದ್ದ ಟಾಮಿ ಈಗ ಮಗಳು ಮತ್ತು ಮೊಮ್ಮಗು ಇರುವ ತನ್ನ ಸಂಸಾರವನ್ನು ಪೋಷಿಸಲು ವ್ಯಾಸಂಗದ ಜೊತೆಗೆ ಪೂರ್ಣಕಾಲಿಕ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾನೆ.

ಪ್ರೇಯಸಿಯ ಸಹಕಾರ

ಅಂದ ಹಾಗೆ ಟಾಮಿಗೆ ಪ್ರೇಯಸಿಯೂ ಇದ್ದಾಳೆ. ಏಂಜೆಲಾಳನ್ನು ದತ್ತಕ ಪಡೆಯುವ ಕಾರ್ಯದಲ್ಲಿ ಆಕೆ ಟಾಮಿಗೆ ಪೂರ್ಣ ಸಹಕಾರ ನೀಡಿದ್ದಾಳೆ. ಏಂಜೆಲಾಳನ್ನು ದತ್ತಕ ಪಡೆದಿರುವುದು ತಾನು ಮದುವೆಯಾಗಿ ಸಂಸಾರ ನಡೆಸಲು ಯಾವುದೇ ಅಡ್ಡಿಯಾಗುವುದಿಲ್ಲ ಎಂಬ ವಿಶ್ವಾಸ ಟಾಮಿಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News