7 ತಿಂಗಳ ಕಾಲ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪ: 18 ಮಂದಿಯ ಬಂಧನ
Update: 2018-07-17 20:06 IST
ಚೆನ್ನೈ, ಜು. 17: ಹನ್ನೊಂದು ವರ್ಷದ ಬಾಲಕಿಯ ಮೇಲೆ 7 ತಿಂಗಳುಗಳ ಕಾಲ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ 18 ಮಂದಿಯನ್ನು ಚೆನ್ನೈಯಿಂದ ಬಂಧಿಸಲಾಗಿದೆ.
ಆರೋಪಿಗಳಲ್ಲಿ ಬಾಲಕಿ ನೆಲೆಸಿದ್ದ ಫ್ಲಾಟ್‌ನ ಭದ್ರತಾ ಸಿಬ್ಬಂದಿ, ಲಿಫ್ಟ್ ನಿರ್ವಾಹಕ ಹಾಗೂ ನೀರು ಪೂರೈಕೆದಾರ ಸೇರಿದ್ದಾರೆ. ಚೆನ್ನೈಯಲ್ಲಿರುವ ಅಪಾರ್ಟಮೆಂಟ್ ಕ್ಯಾಂಪಸ್‌ನ ಒಳಗಡೆ ವಿವಿಧ ಪ್ರದೇಶಗಳಲ್ಲಿ ಬಾಲಕಿಯ ಮೇಲೆ 7 ತಿಂಗಳ ಕಾಲ ಸುಮಾರು 15ಕ್ಕಿಂತಲೂ ಅಧಿಕ ಜನರು ನಿರಂತರ ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 7ನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕಿ ತನ್ನ ಅಕ್ಕನಿಗೆ ಈ ವಿಚಾರ ತಿಳಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆಕೆ ಹೆತ್ತವರ ಗಮನಕ್ಕೆ ತಂದಿದ್ದಾಳೆ. ಹೆತ್ತವರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.