ಸಮುದ್ರದ ನಡುವೆ ಸಿಲುಕಿದ್ದ ಇಂಡೋನೇಷ್ಯಾದ ಇಬ್ಬರನ್ನು ರಕ್ಷಿಸಿದ ಭಾರತೀಯ ನೌಕಾಪಡೆ

Update: 2018-07-17 15:17 GMT
ಸಾಂದರ್ಭಿಕ ಚಿತ್ರ

ಕೊಚ್ಚಿ, ಜು.17: ಅಲಪ್ಪುಝಾ ಜಿಲ್ಲೆಯ ಥೊಟ್ಟಪ್ಪಲ್ಲಿ ಬೀಚ್‌ನಾಚೆ ಸಮುದ್ರದಲ್ಲಿ ಕೆಟ್ಟು ಅತಂತ್ರ ಸ್ಥಿತಿಯಲ್ಲಿದ್ದ ಇಂಡೋನೇಷ್ಯಾದ ತೇಲುವ ಹಡಗುಕಟ್ಟೆಯಲ್ಲಿದ್ದ ಇಬ್ಬರು ಚಾಲಕರನ್ನು ಭಾರತೀಯ ನೌಕಾಪಡೆಯು ಮಂಗಳವಾರ ರಕ್ಷಿಸಿದೆ ಎಂದು ರಕ್ಷಣಾ ವಕ್ತಾರರೋರ್ವರು ಇಲ್ಲಿ ತಿಳಿಸಿದರು.

 ಅಲ್ ಫತಾನ್ ಹೆಸರಿನ ಈ ತೇಲುವ ಡ್ರೈ ಡಾಕ್ ಇಂಡೋನೇಷ್ಯಾದ ಸಬಾಂಗ್‌ನಿಂದ ಅಬುಧಾಬಿಗೆ ಪ್ರಯಾಣಿಸುತ್ತಿದ್ದಾಗ ಎರಡು ದಿನಗಳ ಹಿಂದೆ ಥೊಟ್ಟಪ್ಪಲ್ಲಿ ಸಮುದ್ರದಲ್ಲಿ ಕೆಟ್ಟು ನಿಂತಿತ್ತು. ಅದರೊಳಗೆ ಸಿಕ್ಕಿಹಾಕಿಕೊಂಡಿದ್ದ ಸಿಬ್ಬಂದಿ ನೆರವಿಗಾಗಿ ಭಾರತೀಯ ತಟರಕ್ಷಣಾ ಪಡೆಗೆ ಮೊರೆಯಿಟ್ಟಿದ್ದರು.

ತಟರಕ್ಷಣಾ ಪಡೆಯ ಮನವಿಯ ಮೇರೆಗೆ ನೌಕಾಪಡೆಯು ಹೆಲಿಕಾಪ್ಟರ್ ಬಳಸಿ ಅವರನ್ನು ರಕ್ಷಿಸಿ ಐಎನ್‌ಎಸ್ ಗರುಡಕ್ಕೆ ಕರೆತಂದಿದ್ದು,ಬಳಿಕ ವಲಸೆ ವಿಧಿವಿಧಾನಗಳನ್ನು ಪೂರೈಸಲು ತಟರಕ್ಷಣಾ ಪಡೆ ಮತ್ತು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ ಎಂದು ವಕ್ತಾರರು ತಿಳಿಸಿದರು.

ಸಮುದ್ರದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯ ಸುಲಭವಾಗಿರಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News