ನಮ್ಮ ಪುತ್ರ ಭಾರತ-ಪಾಕ್ ಗಡಿ ದಾಟಿದ್ದನೇ: ಗುಂಪು ಹಲ್ಲೆಯಿಂದ ಮೃತಪಟ್ಟ ಅಝಮ್ ತಾಯಿಯ ಪ್ರಶ್ನೆ

Update: 2018-07-17 15:22 GMT

ಹೈದರಾಬಾದ್, ಜು.17: “ನಮ್ಮ ಪುತ್ರ ಭಾರತ- ಪಾಕ್ ಗಡಿ ದಾಟಿದ್ದನೇ. ಗುಂಪು ದಾಳಿಗೆ ಒಳಗಾದ ಆತನನ್ನು ರಕ್ಷಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಬಹುದಿತ್ತು. ಅಥವಾ ಎಚ್ಚರಿಕೆ ನೀಡಲು ಗಾಳಿಯಲ್ಲಿ ಗುಂಡು ಹಾರಿಸಬೇಕಿತ್ತು. ಆದರೆ ಅದ್ಯಾವುದನ್ನೂ ಮಾಡದ ಪೊಲೀಸರು ನನ್ನ ಮಗನನ್ನು ರಕ್ಷಿಸಲು ವಿಫಲರಾಗಿದ್ದಾರೆ” ಎಂದು ಕರ್ನಾಟಕದ ಬೀದರ್‌ನಲ್ಲಿ ಗುಂಪು ಹಲ್ಲೆಯಿಂದ ಮೃತಪಟ್ಟ ಸಾಫ್ಟ್‌ವೇರ್ ಇಂಜಿನಿಯರ್ ಮುಹಮ್ಮದ್ ಅಝಮ್ ತಾಯಿ ಸಂಕಟ ತೋಡಿಕೊಂಡಿದ್ದಾರೆ.

ತನ್ನನ್ನು ಬೆಂಬತ್ತಿಕೊಂಡು ಬಂದಿದ್ದ ಸ್ಥಳೀಯರಿಗೆ ತನ್ನಲ್ಲಿದ್ದ ಗುರುತು ಪತ್ರವನ್ನು ಅಝಮ್ ತೋರಿಸಿದ್ದಾನೆ. ತಾನೊಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಎಂದು ಆತ ಮತ್ತೆ ಮತ್ತೆ ಹೇಳುತ್ತಿದ್ದರೂ ಮಕ್ಕಳ ಕಳ್ಳನೆಂದು ತಪ್ಪು ತಿಳುವಳಿಕೆಯಿಂದ ಜನರ ಗುಂಪು ಥಳಿಸಿ ಕೊಂದಿದೆ. ಆತನನ್ನು ಕೊಂದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸರಕಾರವನ್ನು ಕೋರುವುದಾಗಿ ಅಝಮ್ ತಂದೆ ಮುಹಮ್ಮದ್ ಉಸ್ಮಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ನನ್ನ ಸಹೋದರನನ್ನು ಅವರು ಮಕ್ಕಳ ಕಳ್ಳನೆಂದು ಭಾವಿಸಲು ಹೇಗೆ ಸಾಧ್ಯ . ಅಝಮ್ ತನ್ನ ಗುರುತುಪತ್ರ ತೋರಿಸಿದರೂ ಹಲ್ಲೆಕೋರರ ಗುಂಪು ಅದನ್ನು ಗಮನಿಸಲೇ ಇಲ್ಲ ಎಂದು ಅಝಮ್‌ನ ಸಹೋದರ ಅಕ್ರಮ್ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ಇದುವರೆಗೆ ಪೊಲೀಸರು ಕೆಲವು ಮಹಿಳೆಯರೂ ಸೇರಿದಂತೆ 18 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ ಗ್ರಾಮಕ್ಕೆ ‘ಹೊರಗಿನ’ ವ್ಯಕ್ತಿಗಳು ಆಗಮಿಸಿರುವ ಬಗ್ಗೆ ಮತ್ತು ಅವರು ಮಕ್ಕಳ ಕಳ್ಳರೆಂದು ಸ್ಥಳೀಯರಿಗೆ ಮಾಹಿತಿ ನೀಡಿದ ಗುಂಪಿನ ಮುಖ್ಯಸ್ಥ ಮನೋಜ್ ಪಾಟೀಲ್‌ನನ್ನೂ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಈ ರೀತಿ ವರ್ತಿಸದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಉಪಮುಖ್ಯಮಂತ್ರಿ, ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News