35 ಲೀ.ಹಾಲಿನಲ್ಲಿ ಸ್ನಾನ ಮಾಡಿದ ಭೂಪ !
ಮುಂಬೈ, ಜು.17: ಹಾಲಿಗೆ ಹೆಚ್ಚಿನ ದರ ಮತ್ತು ಪ್ರತಿ ಲೀ.ಗೆ ಐದು ರೂ.ಸಹಾಯಧನದ ಬೇಡಿಕೆಯೊಂದಿಗೆ ಮಹಾರಾಷ್ಟ್ರದಲ್ಲಿ ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ನೇತೃತ್ವದಲ್ಲಿ ರೈತರು ನಡೆಸುತ್ತಿರುವ ಮುಷ್ಕರ ಮಂಗಳವಾರ ಎರಡನೇ ದಿನಕ್ಕೆ ಕಾಲಿರಿಸಿದೆ. ಇದೇ ವೇಳೆ ಸೊಲ್ಲಾಪರದ ವ್ಯಕ್ತಿಯೋರ್ವ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆಯನ್ನು ಬೆಂಬಲಿಸಿ ಗಮನ ಸೆಳೆದಿದ್ದಾನೆ.
ಮಂಗಳವೇಢಾ ತಾಲೂಕಿನ ಚಂಚಲ ಗ್ರಾಮದ ನಿವಾಸಿ ಸಾಗರ ಲೆಂಡಾವೆ ಎಂಬಾತ ಪ್ರತಿಭಟನೆಯನ್ನು ಬೆಂಬಲಿಸಿ ಹಾಗೂ ಅಧಿಕಾರಿಗಳಿಂದ ಸೂಕ್ತ ಕ್ರಮಕ್ಕಾಗಿ ಗಮನ ಸೆಳೆಯಲು 35 ಲೀಟರ್ ಹಾಲಿನಿಂದ ಸ್ನಾನ ಮಾಡಿದ್ದಲ್ಲದೆ,ತನ್ನ ಜಾನುವಾರುಗಳಿಗೂ ಸ್ನಾನ ಮಾಡಿಸಿದ್ದಾನೆ.
ಸೋಮವಾರ ರಾಜ್ಯಾದ್ಯಂತ ಹಾಲಿನ ಟ್ಯಾಂಕರ್‌ಗಳನ್ನು ತಡೆದ ರೈತರು ಹಾಲನ್ನು ರಸ್ತೆಗೆ ಸುರಿದಿದ್ದರಿಂದ ಹಾಲು ಪೂರೈಕೆಗೆ ವ್ಯತ್ಯಯವುಂಟಾಗಿತ್ತು. ಕೆಲವೆಡೆ ಉಚಿತವಾಗಿ ಹಾಲನ್ನು ವಿತರಿಸಲಾಗಿತ್ತು. ಪ್ರತಿಭಟನಾಕಾರರು ಹಾಲಿನ ಪುಡಿ ಮತ್ತು ಬೆಣ್ಣೆಯ ಮೇಲೆ ಜಿಎಸ್‌ಟಿ ಮನ್ನಾ ಹಾಗು ಸಹಾಯಧನಕ್ಕೆ ಆಗ್ರಹಿಸುತ್ತಿದ್ದಾರೆ.
ಹಾಲನ್ನು ನೆರೆಯ ರಾಜ್ಯಗಳಿಂದ,ವಿಶೇಷವಾಗಿ ಗುಜರಾತ್ ಮತ್ತು ಕರ್ನಾಟಕದಿಂದ ತರಿಸುವುದಾಗಿ ರಾಜ್ಯ ಸರಕಾರವು ಹೇಳಿದೆಯಾದರೂ, ಅದಕ್ಕೆ ಅವಕಾಶ ನೀಡುವುದಿಲ್ಲವೆಂದು ರೈತ ನಾಯಕರು ಘೋಷಿಸಿದ್ದಾರೆ.
ಪರಿಸ್ಥಿತಿಯನ್ನು ಎದುರಿಸಲು ಸರಕಾರವು ಸರ್ವ ಸನ್ನದ್ಧವಾಗಿದೆ ಎಂದು ರಾಜ್ಯದ ಹೈನುಗಾರಿಕೆ ಅಭಿವೃದ್ಧಿ ಸಚಿವ ಮಹಾದೇವ ಜಂಕಾರ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.