ತಿರುವಣ್ಣಾಮಲೈ: ರಷ್ಯನ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

Update: 2018-07-18 04:52 GMT

ಚೆನ್ನೈ, ಜು. 18: ರಷ್ಯನ್ ಮಹಿಳೆಯೊಬ್ಬರಿಗೆ ಮಾದಕವಸ್ತು ನೀಡಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಖ್ಯಾತ ಯಾತ್ರಾಕ್ಷೇತ್ರವಾದ ತಿರುವಣ್ಣಾಮಲೈನಲ್ಲಿ ನಡೆದಿದೆ.

ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿ ಸಂತ್ರಸ್ತ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಒಬ್ಬ ವ್ಯಕ್ತಿಯೂ ಇವರಲ್ಲಿ ಸೇರಿದ್ದಾನೆ. ವೈದ್ಯರು ಪೊಲೀಸರಿಗೆ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ತಿರುವಣ್ಣಾಮಲೈ ನಗರ ಠಾಣಾಧಿಕಾರಿ ಜೆ.ಇಳವರಸಿ, ಭಾರತೀಯ ದಂಡಸಂಹಿತೆಯ ಸೆಕ್ಷನ್ 376 ಮತ್ತು 511ರ ಅನ್ವಯ ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ತೆ ಮಹಿಳೆಯ ಮುಖ ಹಾಗೂ ಕೈಗಳಲ್ಲಿ ಕಚ್ಚಿದ ಗಾಯಗಳಿದ್ದು, ದೇಹದ ಮೇಲ್ಭಾಗದಲ್ಲಿ ತರಚು ಗಾಯಗಳಿವೆ. ಮಹಿಳೆಯ ಲೈಂಗಿಕ ಕಿರುಕುಳ ನಡೆದಿರುವುದನ್ನೂ ಪೊಲೀಸರು ದೃಢಪಡಿಸಿದ್ದಾರೆ. ಘಟನೆ ನಡೆದಿದೆ ಎನ್ನಲಾದ ಅಪಾರ್ಟ್‌ಮೆಂಟ್‌ನಿಂದ ಮಾದಕವಸ್ತುಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಆರು ಮಂದಿ ಶಂಕಿತರ ಪೈಕಿ ಒಬ್ಬ ರಷ್ಯನ್ ಮಹಿಳೆಯನ್ನು ದೇವಾಲಯ ಹಾಗೂ ಆಶ್ರಮಕ್ಕೆ ಕರೆತಂದಿದ್ದ. ಆಕೆ ಶನಿವಾರ ರಾತ್ರಿ ತನ್ನ ಅಪಾರ್ಟ್‌ಮೆಂಟ್‌ಗೆ ಆಹ್ವಾನಿಸಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ. ಇದು ಪರಸ್ಪರ ಸಮ್ಮತಿಯ ಲೈಂಗಿಕ ಸಂಪರ್ಕ ಎಂದು ಆರೋಪಿ ಸಮರ್ಥಿಸಿಕೊಂಡಿದ್ದಾನೆ.

ಸೋಮವಾರ ಸಂಜೆ ಆಕೆಯ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಆದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದಾಗಿ ಹೇಳಿಕೆ ನೀಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News