ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ವಿಚಾರ: ಕೇಂದ್ರ ಸಚಿವ ನಿತಿನ್ ಗಡ್ಕರಿ ಜೊತೆ ಮುಖ್ಯಮಂತ್ರಿ ಚರ್ಚೆ

Update: 2018-07-18 14:40 GMT

ಹೊಸದಿಲ್ಲಿ, ಜು.18: ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕುರಿತಂತೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ನಡೆಸಿದ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಚರ್ಚೆ ನಡೆಸಿದ್ದಾರೆ.

ರಾಜ್ಯದಲ್ಲಿನ ವಿವಿಧ ಹೆದ್ದಾರಿ ಕಾಮಗಾರಿಗಳಿಗೆ ಅಡಚಣೆ ಉಂಟಾಗಿರುವ ಬಗ್ಗೆ ಗಮನಕ್ಕೆ ತಂದು ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸುವಂತೆ ಈ ವೇಳೆ ನಿತಿನ್ ಗಡ್ಕರಿ ಕೋರಿದ್ದಾರೆ.

ಕಂದಾಯ, ಇಂಧನ ಇಲಾಖೆ ಮತ್ತು ಅರಣ್ಯ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಮುಖ್ಯ ಕಾರ್ಯದರ್ಶಿ ಗಳೊಂದಿಗೆ ಸಭೆ ನಡೆಸಿ ಚರ್ಚಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೈಗೊಂಡಿರುವ ಹೆದ್ದಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಇರುವ ಅಡಚಣೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಅಲ್ಲದೆ, ಕೇಂದ್ರದ ಕೋರಿಕೆಯಂತೆ ಮೇಲ್ವಿಚಾರಣೆ ದರವನ್ನು ಶೇ.10 ರಿಂದ ಶೇ. 2.5ಕ್ಕೆ ಇಳಿಸಲು ಈಗಾಗಲೇ, ಸರಕಾರಿ ಆದೇಶವನ್ನು ಹೊರಡಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಕಾಮಗಾರಿಗಾಗಿ ಮರಗಳನ್ನು ತೆರವುಗೊಳಿಸಲು ಮತ್ತು ಅಗತ್ಯವಿದ್ದಲ್ಲಿ ಅರಣ್ಯ ಭೂಮಿಯನ್ನು ನಿಯಮಾನುಸಾರ ನೀಡಲು ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಎಲ್ಲೆಲ್ಲಿ, ವಿಶೇಷ ಭೂಸ್ವಾಧೀನ ಅಧಿಕಾರಿಗಳ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಗೆ ಸೂಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಇರುವ ಅಡಚಣೆಗಳನ್ನು ನಿವಾರಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಇಲಾಖೆಗಳೊಂದಿಗೆ ಸಭೆ ನಡೆಸಿ ಈ ಅಡಚಣೆಗಳನ್ನು ನಿವಾರಿಸುವಂತೆ ಸೂಚಿಸಿರುವುದಾಗಿ ಕೇಂದ್ರ ಸಚಿವರಿಗೆ ಕುಮಾರಸ್ವಾಮಿ ಹೇಳಿದರು.

ಚನ್ನರಾಯಪಟ್ಟದಿಂದ ಹೊಳೇನರಸೀಪುರ-ಅರಕಲಗೂಡು-ಕೊಡ್ಲಿಪೇಟೆ ಮಾರ್ಗವಾಗಿ ಮಡಿಕೇರಿ ಸೇರುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಭೂಸಾರಿಗೆ ಇಲಾಖೆಯು ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಈ ಮಾರ್ಗದ ನಿರ್ಮಾಣಕ್ಕಾಗಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಮುಖ್ಯಮಂತ್ರಿಗೆ ನಿತಿನ್ ಗಡ್ಕರಿ ಸೂಚಿಸಿದ್ದಾರೆ. ಅದರಂತೆ ಈ ಮಾರ್ಗಕ್ಕೆ ಸಂಬಂಧಿಸಿದ ನೀಲನಕ್ಷೆಯನ್ನು ಸಿದ್ಧಪಡಿಸಿ, ಕೇಂದ್ರದ ಅನುಮೋದನೆ ಪಡೆದುಕೊಂಡ ಬಳಿಕ ಈ ಮಾರ್ಗದ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು.

ಕೇಂದ್ರ ಭೂಸಾರಿಗೆ ಇಲಾಖೆಯು ಬಿಳಿಕೆರೆ-ಕೆ.ಆರ್.ನಗರ-ಹೊಳೆನರಸೀಪುರ-ಹಾಸನ ಮಾರ್ಗವಾಗಿ ಸಾಗುವ ಬೇಲೂರು ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ 373 ಎಂದು ಘೋಷಿಸಲಾಗಿದೆ. ಈ ರಾಷ್ಟ್ರೀಯ ಹೆದ್ದಾರಿ ಒಂದು ಭಾಗಕ್ಕೆ ಕೇಂದ್ರವು ಅನುಮೋದನೆ ನೀಡಿದೆ. ಅಲ್ಲದೆ, ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ.

ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ 48 ಈಗಾಗಲೇ ನಾಲ್ಕು ಪಥಗಳ ರಸ್ತೆ ಕಾಮಗಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ತೆರವುಗೊಳಿಸಲಾಗಿದೆ. ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಅಲ್ಲದೆ, ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಈ ದೃಷ್ಟಿಯಿಂದ ಈ ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನು ‘ಆಕ್ಸಸ್ ಕಂಟ್ರೋಲ್’ ಹಾಗೂ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಿಕೊಡುವಂತೆ ಮುಖ್ಯಮಂತ್ರಿ, ಕೇಂದ್ರ ಸಚಿವರಿಗೆ ಮನವಿ ಮಾಡಿದರು.

ರಾಷ್ಟ್ರೀಯ ಹೆದ್ದಾರಿ 48ನೇ ಚನ್ನರಾಯಪಟ್ಟಣ ಹಾಗೂ ಹಾಸನ ಬೈಪಾಸ್ ಮಾರ್ಗವು ದ್ವಿಪಥವಾಗಿದ್ದು, ಇಲ್ಲಿಯೂ ಸಂಚಾರ ದಟ್ಟಣೆ ಅಧಿಕವಾಗಿದ್ದು, ಅಪಘಾತಗಳು ಹೆಚ್ಚಾಗುತ್ತಿವೆ. ಪ್ರಮುಖ ಮಾರ್ಗಗಳಲ್ಲಿರುವ ಜಂಕ್ಷನ್‌ಗಳಲ್ಲಿ ಮೇಲುಸೇತುವೆ ಇಲ್ಲದಿರುವ ಕಾರಣ ಸಂಚಾರ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ, ಈ ಮಾರ್ಗವನ್ನು ನಾಲ್ಕು ಪಥದ ಹಾಗೂ ಸೂಕ್ತ ಕಡೆಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡುವಂತೆ ಮನವಿ ಮಾಡಿದರು.

ಬೆಂಗಳೂರು-ಮೈಸೂರು-ಮಡಿಕೇರಿಯಿಂದ ಬಂಟ್ವಾಳ ಮಾರ್ಗವನ್ನು(ಬಿ.ಸಿ. ರೋಡ್) ರಾಷ್ಟ್ರೀಯ ಹೆದ್ದಾರಿ 275 ಎಂದು ಘೋಷಿಸಲಾಗಿದ್ದು, ಈ ಹೆದ್ದಾರಿಯ ಪೈಕಿ ಬೆಂಗಳೂರು-ಮೈಸೂರು ಮಾರ್ಗದ ಆರು ಪಥಗಳ ಕಾಮಗಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರಾರಂಭಿಸಿದೆ. ಮೈಸೂರಿನಿಂದ ಮಡಿಕೇರಿ ವರೆಗಿನ ಮಾರ್ಗಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕ್ರಿಯಾಯೋಜನೆಯನ್ನು ಸಿದ್ಧಪಡಿಸುತ್ತಿದೆ. ಮಡಿಕೇರಿಯಿಂದ ಬಿ.ಸಿ.ರೋಡ್‌ವರೆಗಿನ ಮಾರ್ಗದ ಕಾಮಗಾರಿಗಳನ್ನು ಶೀಘ್ರವಾಗಿ ಪ್ರಾರಂಭಿಸಲು ಕ್ರಿಯಾಯೋಜನೆ ಸಿದ್ಧಪಡಿಸಲು ಸಂಬಂಧಿಸಿದವರಿಗೆ ಸೂಚಿಸುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News